ಸುಗಂಧಿ… ಹೆಸರಲ್ಲೇ ಸುವಾಸನೆಯಿದೆ. ಯಾವುದನ್ನು ಸುಗಂಧಿ ಪಸರಿಸ ಹೊರಟಿದ್ದಾಳೆ ಎಂದು ತಿಳಿಯಬೇಕಾದರೆ ಅವಳನ್ನೊಮ್ಮೆ ನೋಡಲೇಬೇಕು. ಅಲ್ಲಿ ಪರಿಚಯವಾಗುವ ಸುಗಂಧಿ ಎಲ್ಲವನ್ನೂ ಹೇಳುತ್ತಾಳೆ.. ನಿಮ್ಮೊಂದಿಗೆ… ಆ ಕತ್ತಲೆ ಕೋಣೆಯಲ್ಲಿ ಬಿಳಿಯ ಪರದೆ ಮೇಲೆ ಬಣ್ಣದ ಬೆಳಕಿನಲ್ಲಿ ತೆರೆದ ಕಣ್ಣ್ ಕಿವಿ ಮನಕ್ಕೆ ಮತ್ತೆಲ್ಲಿಯೂ ಹೋಗದಂತೆ ತನ್ನೊಳಗೆ ಹಿಡಿದಿಟ್ಟು ಎಲ್ಲವನ್ನೂ ಅವಳೇ ನಿಮಗೆ ನಮ್ಮದೇ ಆಡು ಭಾಷೆ ಕುಂದಗನ್ನಡದಲ್ಲಿ ಸೊಗಸಾಗಿ ತಿಳಿಸುತ್ತಾಳೆ.
ನೋಡಿ ಅವಳನ್ನೊಮ್ಮೆ… ಕಾಯುತ್ತಿದ್ದಾಳೆ ನಿಮ್ಮಂತೆ ಅವಳು ಮಾತನಾಡಲು ಇತ್ತೀಚೆಗೆ ತೆರೆಕಂಡ ಕಡಲ ತಡಿಯ ಭಾರ್ಗವ ಡಾ. ಶಿವರಾಮ ಕಾರಂತರ ಕೃಪಾರ್ಷಿವಾದ ಹಾಗೆ ಜಿ.ಆರ್.ಮೂರ್ತಿ ಅವರ ಕಥೆ – ಚಿತ್ರ ಕಥೆ -ನಿರ್ದೇಶನ, ನರೇಂದ್ರ ಕುಮಾರ್ ಕೋಟ ಇವರ ನಿರ್ಮಾಣದಲ್ಲಿ ಉತ್ತಮ ಸಂಭಾಷಣೆ, ಸಾಹಿತ್ಯ, ಸಂಗೀತ, ಛಾಯ ಚಿತ್ರಣ ಹಾಗೆ ವಿನಯ ಪ್ರಸಾದ್, ಗುರು ಬನ್ನಂಜೆ ಸಂಜೀವ ಸುವರ್ಣ, ರಘು ಪಾಂಡೇಶ್ವರ ಸೇರಿದಂತೆ ನಮ್ಮ ಈ ಕೋಟ ಕುಂದಾಪುರ ಭಾಗದ ಪ್ರಮುಖರನ್ನು ಒಳಗೊಂಡ ಅತ್ಯುತ್ತಮ ತಾರಾಗಣದಲ್ಲಿ ನಮ್ಮದೇ ಕರಾವಳಿ ಭಾಗದ ಪರಿಸರದಲ್ಲಿ ಚಿತ್ರಣಗೊಂಡು ಉತ್ತಮ ಸಂದೇಶವನ್ನು ಹೊತ್ತು ತಂದವಳು ಈ ಸುಗಂಧಿ.
ಅವಳೇನು ಎನ್ನುತ್ತಾಳೆ? ನನಗೆ ನನ್ನೊಳಗೆ ಮೂಡಿದ್ದನ್ನು, ಅನಿಸಿದ್ದನ್ನು, ಮನಸ್ಸು ಪಿಸುಗುಟ್ಟಿದ್ದನ್ನು ನಾನು ಹೀಗೆ ಹೇಳಬಲ್ಲೆ ನಿಮ್ಮೊಡನೆ. ಹತ್ತು ವರುಷಗಳಿಂದ ಮರಳಿ ಇನ್ನೂ ಬಾರದ ಗಂಡನ ಬರುವಿಕೆಗೆ ಕಡಲ ದಿಕ್ಕನ್ನೇ ಕಾಯುವ ಆ ಮುಗ್ಧ ಹೆಣ್ಣು ಜೀವ ಕೇವಲ ಅವಳ ಉಡುಗೆಯಲ್ಲಿ ಅವಳ ಪ್ರತಿ ಮಾತು ನಡೆ ನುಡಿ ಮೌನದಲ್ಲೂ.. ಕಣ್ಣೀರಲ್ಲೂ… ಭಯದಲ್ಲೂ ಅಸಹಾಯಕತೆ ಅಲ್ಲೂ… ಎಲ್ಲೆಲ್ಲೂ… ನಮ್ಮದೇ ಗ್ರಾಮೀಣ ಬಡ ಅವಿದ್ಯಾವಂತ ಮುಗ್ದ ಹೆಣ್ಣಿನ ಪ್ರತೀಕ ಆ ಲಕ್ಷ್ಮಿ. ಆ ಸಣ್ಣ ಗುಡಿಸಲೊಳಗೆ. ಲಕ್ಷ್ಮೀಗೆ ಆಸರೆ ಆಸೆ ಎಲ್ಲವೂ ಆ ಪುಟ್ಟ ಜೀವ “ಸುಗಂಧಿ”
ಶಾಲೆಯಲ್ಲಿ ಶಿಕ್ಷಕರ ಪಾಠದಲ್ಲಿ ಪರಿಚಯಿಸಿದ ಕಾರಂತಜ್ಜನ ಪರಿಚಯ ಹೇಗೆ ಅವಳೊಳಗೆ ಹೊಸ ಲೋಕವನ್ನು ತೆರೆದಿಟ್ಟು ಅವಳನ್ನು ತನ್ನ ಹೊಸ ಆಸಕ್ತಿಯತ್ತ ಸ್ವಲ್ಪ ಸ್ವಲ್ಪವೇ ಎಳೆಯುತ್ತ ಪೂರ್ಣ ಪ್ರಮಾಣದಲ್ಲಿ ಅವಳನ್ನು ಸೆಳೆದುಕೊಂಡೆ ಬಿಟ್ಟಿತ್ತು. ಬೇರೇನೋ ಅಲ್ಲ, ಕಾರಂತಜ್ಜನ ಹೆಜ್ಜೆ ಗುರುತುಗಳಂತೆ ಕರಾವಳಿ ಭಾಗದ ಮಣ್ಣಿನೊಳಗೆ ಗಟ್ಟಿಯಾಗಿ ಬೇರು ಬಿಟ್ಟ ಅದ್ವಿತೀಯ ಕಲೆ ಯಕ್ಷಗಾನ ಹೌದು, ಆ ಸುಗಂಧಿಯನ್ನು ಸೆಳೆದಿದ್ದು ಕೈ ಬೀಸಿ ಕರೆದಿದ್ದು..
ಬಡತನಕ್ಕೆ ತಕ್ಕ ಬದುಕು ಹಾಸಿಗೆ ಇದಷ್ಟೇ ಕಾಲು ಚಾಚು ಎಂಬಂತೆ ಸುಗಂಧಿಗಿರುವ ದಿಕ್ಕು ಅವಳೇ ಆ ತಾಯಿ ಲಕ್ಷ್ಮೀ ಇರುವ ಒಬ್ಬ ಮಗಳು ಓದಿ ದೊಡ್ಡವಳಾಗಿ ಅವಳ ಕಾಲ ಮೇಲೆ ನಿಂತರೆ ಸಾಕಷ್ಟೆ ಬೇರೆ ಬೇಡ ಎನ್ನುವ ಆ ಮುಗ್ಧ ಜೀವ ಮಗಳ ಕಲೆಗೆ ಬೇಸರಿಸಿ ಬಯ್ಯುತ್ತಿದ್ದು ಶಾಲೆಯಲ್ಲಿ ಶಿಕ್ಷಕರ ಸ್ನೇಹಿತರ ಮಾತುಗಳು ಬೇಸರ ತರಿಸಿದ್ದು. ಎಲ್ಲವೂ ಆರಂಭಕ್ಕೆ ಅಷ್ಟೇ ಕಾರಂತ ಅಜ್ಜನೇ ಗುರುವೆಂದು ಭಾವಿಸುವ ಆ ಸುಗಂಧಿ ಅಂತೂ ಸ್ಪರ್ಶಿಸುತ್ತಾಳೆ ಮಹಾನ್ ಗುರುವಿನ ಪಾದವನ್ನು ತನ್ನ ಅಮೂಲ್ಯ ಸಂಪತ್ತು ಯಕ್ಷಗಾನದ ತನ್ನ ಸರ್ವ ವಿದ್ಯೆಯನ್ನು ಈ ಸುಗಂಧಿಗೆ ಧಾರೆ ಎರೆಯಬೇಕು ಎಂದು ನಡೆಸುವ ಹೋರಾಟ ಗುರು ಶಿಷ್ಯೆಯರ ಸಮಾಗಮ ನಿರಂತರ ಕಲಿಕೆ.
ನಡುವಲ್ಲಿ ಒಂದಿಷ್ಟು ತೊಡಕು ಎಲ್ಲವನ್ನೂ ಮೆಟ್ಟಿ ನಿಲ್ಲುತ್ತ ಕೊನೆಗೂ ಸುಗಂಧಿ ಸಾಧಿಸುತ್ತಾಳೆ ಜಗತ್ತು ಕೊಂಡಾಡುತ್ತದೆ. ಗುರು ಪರಂಪರೆಯನ್ನು ತನ್ನ ಹೆಗಲ ಮೇಲೆಹೊತ್ತು ಇನ್ನೂ ಸಾಧಿಸ ಬೇಕಿದೆ ಸುಗಂಧಿಗೆ ಕಲೆಗೆ… ಜಾತಿ ಇಲ್ಲ ಕಲೆಗೆ ಬಡವ ಶ್ರೀಮಂತ ಇಲ್ಲ, ಕಲೆಗೆ ಹೆಣ್ಣು ಗಂಡಿಲ್ಲ ಕಲೆಗೆ ಕಲೆಯನ್ನು ಆರಾಧಿಸುವ ಪ್ರೀತಿಸುವ ಎದೆ ಗಪ್ಪಿ ಮುದ್ದಿಸುವ ಜೀವ ಬೇಕು ಎನ್ನುತ್ತಾ ಕೊನೆಗೂ ಕಾರಂತಜ್ಜನಿಗೆ ಮಕ್ಕಳು ಎಂದರೆ ಎಷ್ಟಿಸ್ಟ ಎನ್ನುವುದನ್ನೂ ಹೇಳದೇ ಬಿಡಲಿಲ್ಲ ಈ ಸುಗಂಧಿ…
ಸುಮಾರು 2 ಗಂಟೆ ಕಾಲ ನಿಮ್ಮನ್ನ ಎಲ್ಲಿಯೂ ಹೋಗದಂತೆ ನಿಮ್ಮ ಮನಸ್ಸನ್ನು ತನ್ನತ್ತ ಎಳೆಯುತ್ತ ನಡು ನಡುವೆ ನಿಮ್ಮನ್ನು ನಗುವಂತೆ, ನಡು ನಡುವೆ ಅಳುವಂತೆ. ನಡು ನಡುವೆ ಸಂಗೀತಕ್ಕೆ ನಿಸರ್ಗಕ್ಕೆ ತಲೆದೂಗುವಂತೆ ಅಲ್ಲಲ್ಲಿ ನಿಮ್ಮನ್ನು ಮೌನವಾಗುವಂತೆ ಹಲವು ರೀತಿಯಲ್ಲಿ ನಿಮ್ಮನ್ನು ಕಾಡುತ್ತಾ ತನ್ನೊಂದಿಗೆ ಹೆಜ್ಜೆ ಇಡುವಂತೆ ಮಾಡುತ್ತಾಳೆ ಈ ಸುಗಂಧಿ…..ಎಲ್ಲವನ್ನೂ ಸುಗಂಧಿ ನಿಮಗೂ ಹೇಳುತ್ತಾಳೆ ನೀವೇ ಕೇಳಿ ಅವಳ ಕಥೆ. ಉತ್ತಮ ಚಿತ್ರದ ಕೊಡುಗೆ ಇತ್ತ ಸರ್ವರಿಗೂ ಅಭಿನಂದನೆಗಳು.
-ಮಂಜುಳಾ. ಜಿ. ತೆಕ್ಕಟ್ಟೆ.