ಉಡುಪಿ: ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ವೈದ್ಯರ ದಿನಾಚರಣೆ, ಕುಟುಂಬೋತ್ಸವ ಮತ್ತು ವೈದ್ಯ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಮಣಿಪಾಲ್ ಇನ್ ಹೊಟೇಲ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಳು ರಂಗಭೂಮಿಯ ಹೆಸರಾಂತ ಕಲಾವಿದ ಅರವಿಂದ್ ಬೋಳಾರ್, ವೈದ್ಯರು ನಮ್ಮ ಕಣ್ಣಿಗೆ ಕಾಣುವ ದೇವರಿದ್ದಂತೆ. ಅವರು ತಮ್ಮ ಕುಟುಂಬಕ್ಕೆ ಸಮಯ ನೀಡದೆ ರೋಗಿಗಳ ಆರೈಕೆಯಲ್ಲಿ ಸಮಯ ಕಳೆಯುತ್ತಾರೆ. ವೈದ್ಯರಿಗೆ ಸಿಗುವ ಈ ಅಪೂರ್ವ ಅವಕಾಶ ಬೇರೆ ಯಾರಿಗೂ ಸಿಗಲು ಸಾದ್ಯವಿಲ್ಲ ಎಂದರು.
ಮುಖ್ಯ ಅತಿಥಿ ಕಾನೂನು ಸಲಹೆಗಾರ ಮತ್ತು ಹೆಸರಾಂತ ವಕೀಲರಾದ ವಿವೇಕಾನಂದ ಪಣಿಯಾಲ ಮಾತನಾಡಿ, ವೈದ್ಯರಿಗೆ ನಮ್ಮ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಬೇಕು ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ವೈದ್ಯರಿಗೆ ತೊಂದರೆ ಕೊಡಲಾಗುತ್ತಿದೆ. ಇದು ಸಲ್ಲದು ಎಂದರು.
ಎ.ಎಫ್.ಐ ರಾಜ್ಯ ಕಾರ್ಯದರ್ಶಿ ಡಾ. ಸೋಮಶೇಖರ್ ಹುದ್ದಾರ್, ವೈದ್ಯರು ಸಮಾಜದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅವರ ಕುಟುಂಬದವರ ಬೆಂಬಲ ಮತ್ತು ಪ್ರೋತ್ಸಾಹ ಕಾರಣ. ಹೀಗಾಗಿ ಈ ರೀತಿಯ ಕುಟುಂಬೋತ್ಸವ ಉತ್ತಮವಾದ ಕೆಲಸ ಎಂದರು.
ಗಿರಿಜಾ ಎಂಟರ್ಪ್ರೈಸಸ್ ಮಾಲಕ ರವೀಂದ್ರ ಶೆಟ್ಟಿ ಶುಭ ಹಾರೈಸಿದರು. ಎಸ್.ಡಿ.ಎಂ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಶೆಟ್ಟಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರುಗಳಾದ ಡಾ. ಜಿ.ಎಂ ಕಂಠಿ, ಕಾರ್ಕಳ ತಾಲೂಕಿನ ಡಾ. ಭರತೇಶ್ ಎ, ಕುಂದಾಪುರದ ಡಾ. ಸುರೇಶ್ ಶೆಟ್ಟಿ ನಾಡಾ ರವರಿಗೆ ವೈದ್ಯ ಸಿರಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಎಫ್.ಐ ಜಿಲ್ಲಾಧ್ಯಕ್ಷ ಡಾ. ಎನ್.ಟಿ ಅಂಚನ್ ವಹಿಸಿದ್ದರು. ವೇದಿಕೆಯಲ್ಲಿ ಕುಂದಾಪುರ ತಾಲೂಕು ಅಧ್ಯಕ್ಷ ಡಾ. ರವೀಂದ್ರ, ಕಾರ್ಕಳ ತಾಲೂಕು ಅಧ್ಯಕ್ಷ ಡಾ. ಸುದರ್ಶನ್ ಹೆಬ್ಬಾರ್, ಉಡುಪಿ ತಾಲೂಕು ಅಧ್ಯಕ್ಷ ಡಾ. ಮನೋಜ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಡಾ. ರವಿ ಪ್ರಸಾದ್ ಹೆಗ್ಡೆ ನಿರೂಪಿಸಿದರು. ಡಾ. ಸತೀಶ್ ರಾವ್ ವಂದಿಸಿದರು. ವೈದ್ಯರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.