ಶ್ರೀನಗರ: ಜಮ್ಮು ಕಾಶ್ಮೀರದ ಅಮರನಾಥ ದೇಗುಲದ ಸಮೀಪ ನಡೆದ ಮೇಘಸ್ಫೋಟಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸ್, ಎನ್‌ಡಿಆರ್‌ಎಫ್, ಐಟಿಬಿಪಿ ಮತ್ತು ಸೇನಾ ಸಿಬ್ಬಂದಿಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ನಿನ್ನೆ ಸಂಜೆ ಸಂಭವಿಸಿದ ಮೇಘಸ್ಫೋಟವು ಅಮರನಾಥ ಗುಹಾ ದೇಗುಲದ ಬಳಿ ಪ್ರವಾಹಕ್ಕೆ ಕಾರಣವಾಯಿತು. ಭಾರೀ ಮಳೆಯ ನಂತರ ಗುಹೆಯ ಮೇಲಿನಿಂದ ಮತ್ತು ಬದಿಗಳಿಂದ ನೀರಿನ ಹರಿವು ಹೆಚ್ಚಾಗಿತ್ತು. ಘಟನೆಯಿಂದ ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿದೆ. ಸುಮಾರು 35-40 ಮಂದಿ ನಾಪತ್ತೆಯಾಗಿದ್ದಾರೆ.
ಘಟನೆಯಲ್ಲಿ ಸುಮಾರು 65 ಮಂದಿ ಗಾಯಗೊಂಡಿದ್ದು, ಇಬ್ಬರನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೇಘಸ್ಫೋಟದ ಹಿನ್ನೆಲೆಯಲ್ಲಿ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮೇಘಸ್ಫೋಟದ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಕಾಶ್ಮೀರದಲ್ಲಿನ ಆರೋಗ್ಯ ಸೇವೆಗಳ ನಿರ್ದೇಶನಾಲಯ ತನ್ನ ಎಲ್ಲಾ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಿದೆ ಮತ್ತು ತಕ್ಷಣವೇ ತಮ್ಮ ಕರ್ತವ್ಯಗಳಿಗೆ ವರದಿ ಮಾಡುವಂತೆ ಸೂಚಿಸಿದೆ. ಅಲ್ಲದೆ, ಎಲ್ಲಾ ಅಧಿಕಾರಿಗಳು ತಮ್ಮ ಫೋನ್‌ಗಳನ್ನು ಸ್ವಿಚ್ ಆನ್‌ನಲ್ಲಿ ಇರಿಸಿಕೊಳ್ಳಲು ಸೂಚಿಸಲಾಗಿದೆ. ಸೇನಾ ಹೆಲಿಕಾಪ್ಟರ್ ಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.