ಬಳ್ಳಾರಿ: ಡೀಡ್ಸ್ ಸಂಸ್ಥೆ ತಳಮಟ್ಟದಲ್ಲಿ ಕಾನೂನಿನ ಅರಿವನ್ನು ಮೂಡಿಸುತ್ತಿರುವುದು ಸಂತಸದ ಸಂಗತಿ. ಕಾನೂನು ಸಮುದ್ರ ಇದ್ದ ಹಾಗೆ. ಮಗುವಿನ ಭ್ರೂಣದ ಹುಟ್ಟಿನಿಂದ ಹಿಡಿದು ವ್ಯಕ್ತಿ ಸಾಯುವವರೆಗೆ ಪ್ರತೀ ವ್ಯಕ್ತಿ ಕಾನೂನನ್ನು ನಿಭಾಯಿಸಬೇಕಾಗುತ್ತದೆ.
ಹುಟ್ಟಿದ ತಕ್ಷಣ ಜನನವನ್ನು ನೋಂದಾಯಿಸಬೇಕಾಗುತ್ತದೆ. ಹಿಂಸೆಗೊಳಗಾದ ಮಹಿಳೆಗೆ ಸಂಬಂಧಿಸಿದ ದೌರ್ಜನ್ಯ ತಡೆ ಕಾಯ್ದೆ ಆಕೆಗೆ ಎಲ್ಲಾ ರೀತಿಯ ಪರಿಹಾರವನ್ನು ನೀಡುತ್ತದೆ. ಅದೆಷ್ಟೋ ಕಾನೂನುಗಳಿದ್ದರೂ ದೌರ್ಜನ್ಯ ನಿಂತಿಲ್ಲ. ಇದಕ್ಕೆ ಎಲ್ಲರೂ ಕಾನೂನುನನ್ನು ತಿಳಿದುಕೊಳ್ಳುತ್ತಾ, ನಮ್ಮ ಸುತ್ತಮುತ್ತಲಿನ ಜನರಿಗೆ ಮಾಹಿತಿ ನೀಡುವ ಮೂಲಕ ಹಿಂಸೆ ನಿಲ್ಲಿಸಬಹುದು.
ಸಂವಿಧಾನ ನಮ್ಮೆಲ್ಲರಿಗೆ ವಿವಿಧ ಹಕ್ಕುಗಳನ್ನು ನೀಡಿದೆ. ಜತೆಗೆ ನಮ್ಮ ಕರ್ತವ್ಯಗಳನ್ನೂ ತಿಳಿಸಿದೆ. ಹಕ್ಕು ಕರ್ತವ್ಯಗಳನ್ನು ತಿಳಿದುಕೊಂಡು ಸುಗಮ ಜೀವನ ನಡೆಸಬಹುದು. ಹಕ್ಕುಗಳಿಗೆ ತೊಂದರೆಯಾದಾಗ ಹಿಂಸೆ ನಡೆದಾಗ ನ್ಯಾಯಾಲಯದ ಮೊರೆ ಹೋಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಲಬಹುದು. ಈ ಮೂಲಕ ನಮಗಾಗುವ ಶೋಷಣೆಗಳನ್ನು ತಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಗಿರುವ ಸತೀಶ್ ಜೆ ಬಾಳಿ ಹೇಳಿದರು.
ಅವರು ಬಳ್ಳಾರಿಯ ಬಿಡಿಎಎ ಸಭಾಂಗಣದಲ್ಲಿ ಡೀಡ್ಸ್‌ಮಂಗಳೂರು, ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಬಳ್ಳಾರಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹುಬ್ಬಳ್ಳಿ, ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಳ್ಳಾರಿ ಜಿಲ್ಲಾ ಪೂರಕ ಕಾನೂನು ಸುಗಮಕಾರರ ಸಮುಚ್ಚಯ ಮತ್ತು ಸಹಭಾಗಿ ಸ್ವಯಂ ಸೇವಾ ಸಂಸ್ಥೆಗಳು ಬಳ್ಳಾರಿ ಸಹಭಾಗಿತ್ವದಲ್ಲಿ ನಡೆದ ಕಾನೂನು ಸಮಾವೇಶದಲ್ಲಿ ಮಾತನಾಡಿದರು.
ಡೀಡ್ಸ್ ಮಂಗಳೂರು ನಿರ್ದೇಶಕಿ ಮರ‍್ಲಿನ್ ಮಾರ್ಟಿಸ್ ಸ್‌ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಪ್ರತಿ ಮನೆಯಲ್ಲಿ ಮಹಿಳೆಯರು ತಾರತಮ್ಯ, ದೌರ್ಜನ್ಯವನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನ ಮಹಿಳೆಯರಿಗೆ ಇದು ಹಿಂಸೆ ಅಂತ ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಹಿಂಸೆ, ಬಾಲ್ಯವಿವಾಹ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಜಾಸ್ತಿಯಾಗುತ್ತಿವೆ.
ಇವು ಅಪರಾಧ ಅನ್ನುವ ಜಾಗೃತಿ ಜನರಲ್ಲಿ ಬೆಳೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಬಳ್ಳಾರಿಯಲ್ಲಿ ೧೨ ದಿನಗಳ ಲಿಂಗತ್ವ ಮಹಿಳಾ ಕಾನೂನುಗಳು, ಮಹಿಳಾ ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿ ಪೂರಕ ಕಾನೂನು ತರಬೇತಿಯನ್ನು ನಡೆಸಿದೆವು. ಈ ಪೂರಕ ಕಾನೂನು ಸುಗಮಕಾರರ ಮೂಲಕ ಪ್ರತೀ ಹಂತದಲ್ಲಿ ಹಳ್ಳಿಗಳ ೨,೦೦೦ ಮಂದಿಗೆ ಮಾಹಿತಿ ಕಾರ್ಯಕ್ರಮವನ್ನು ನಡೆಸಿದೆವು ಎಂದರು.
ವೇದಿಕೆಯಲ್ಲಿ ವಿಮುಕ್ತಿ ಸಂಸ್ಥೆ ಉಪಾಧ್ಯಕ್ಷರಾದ ದುರ್ಗಮ್ಮ, ಬಳ್ಳಾರಿ ಜಿಲ್ಲಾ ಪೂರಕ ಕಾನೂನು ಸುಗಮಕಾರರ ಸಮುಚ್ಚಯದ ಲಕ್ಷ್ಮೀ ಎಂ ಟಿ, ಕೆ ಎಂ ಮಲ್ಲಮ್ಮ, ಯಶೋಧ, ಮಲ್ಲಮ್ಮ ತಿಮ್ಮಲಾಪುರ, ಮಂಜುಳಾ ಕರ‍್ಲಗುಂದಿ, ವಿಮುಕ್ತಿ ಸಿಬ್ಬಂದಿ ಮೊಹಮ್ಮದ್ ಇಮ್ರಾನ್ ಪಿ ಉಪಸ್ಥಿತರಿದ್ದರು.
ಡೀಡ್ಸ್‌ನ ಕಾರ‍್ಯಕ್ರಮ ಸಂಯೋಜಕ ತುಕಾರಾಮ ಎಕ್ಕಾರು, ವಕಾಲತ್ತು ಸಂಯೋಜಕಿ ಖುಶಿ ದೇಸಾಯಿ, ದಾಖಲಾತಿ ಸಂಯೋಜಕಿ ಜೆಸಿಂತಾ ಪಿರೇರಾ, ಸಹಾಯಕ ಹಣಕಾಸು ವ್ಯವಸ್ಥಾಪಕಿ ನಿಖಿತಾ, ಕಾರ‍್ಯಕ್ಷೇತ್ರ ಸಂಯೋಜಕಿ ಸರಿತಾ ಉಪಸ್ಥಿತರಿದ್ದರು. ಸುಗಮಕಾರರಾದ ನಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಬಸಮ್ಮ ಸ್ವಾಗತಿಸಿ, ಡೀಡ್ಸ್‌ನ ಬಳ್ಳಾರಿ ಜಿಲ್ಲಾ ಕಾರ‍್ಯಕ್ರಮ ಸಂಯೋಜಕಿ ಲಕ್ಷ್ಮೀ ವಂದಿಸಿದರು.