ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಹಿಂದಿನ ವಿದ್ಯಾರ್ಥಿನಿ ಲಾವಣ್ಯ ಎನ್ ಕೆ ಅಮೆರಿಕದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋ ಕೊಡಮಾಡುವ ಪ್ರತಿಷ್ಠಿತ ಗಾಂಧಿ-ಕಿಂಗ್ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ.
ಶೀಘ್ರದಲ್ಲೇ ಅಮೆರಿಕದ ಅಲಬಾಮಾ ವಿಶ್ವವಿದ್ಯಾಲಯಕ್ಕೆ ಪ್ರಯಾಣಿಸಲಿರುವ ಇವರು ಫೆಲೋಶಿಪ್‌ಗೆ ಆಯ್ಕೆಯಾದ ಹತ್ತು ಭಾರತೀಯರಲ್ಲಿ ಒಬ್ಬರು ಮತ್ತು ಕರ್ನಾಟಕದಿಂದ ಆಯ್ಕೆಯಾದ ಏಕಮಾತ್ರ ವಿದ್ಯಾರ್ಥಿನಿಯಾಗಿದ್ದರೆ.
ಲಾವಣ್ಯ ಎನ್ ಕೆ 2019- 2021 ಸಾಲಿನ ಇಕೋಸಾಫಿಕಲ್ ಎಸ್ಥೆಟಿಕ್ಸ್ ಸ್ನಾತಕ್ಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಚೆನ್ನೈನ ನಲಂದಾವೇ ಫೌಂಡೇಶನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಸಿಪಿಎಎಸ್, ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಲು ವಿಶೇಶವಾಗಿ ರೂಪಿಸಲಾದ ಅಪರೂಪದ ಮೂರು ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಾದ – ಎಂಎ (ಇಕೋಸಾಫಿಕಲ್ ಎಸ್ಥೆಟಿಕ್ಸ್), ಎಂಎ (ಆರ್ಟ್ ಅಂಡ್ ಪೀಸ್ ಸ್ಟಡೀಸ್, ಮತ್ತು ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) ನಡೆಸುತ್ತಿದೆ.
ಗಾಂಧಿ-ಕಿಂಗ್ ಫೆಲೋಶಿಪ್‌ನ ಗುರಿಯು ಮಹಾತ್ಮಾ ಗಾಂಧಿ ಮತ್ತು ಡಾ. ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್ ಅವರ ಉದ್ದೇಶದಂತೆ ಸ್ಥಳೀಯ, ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ಹಕ್ಕುಗಳು, ಸಾಮಾಜಿಕ ನ್ಯಾಯ, ಸಾಮಾಜಿಕ ಒಳಗೊಳ್ಳುವಿಕೆಯ ಕುರಿತು ಒಟ್ಟಾಗಿ ಕೆಲಸ ಮಾಡಲು ಭಾರತ ಮತ್ತು ಅಮೆರಿಕೆಯ ಯುವ ನಾಯಕರನ್ನು ಪ್ರೇರೇಪಿಸುವುದಾಗಿದೆ.