ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ 33000 ಕೋಟಿ ರೂಪಾಯಿಗಳ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದರು. ದೇಶದ ಮೂರನೇ ಸಂಪೂರ್ಣ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ ಅನ್ನು ಉದ್ಘಾಟಿಸಿದರು ಮತ್ತು 15000 ಕೋಟಿ ರೂಪಾಯಿಗಳ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಐದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಏಳು ರೈಲ್ವೆ ಯೋಜನೆಗಳಿಗೂ ಪ್ರಧಾನಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವು ಕರ್ನಾಟಕದಲ್ಲಿ ಅಭಿವೃದ್ಧಿಗೆ ಉತ್ತೇಜನ ನೀಡಿದೆ. ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ನಗರವು ದಾಪುಗಾಲು ಹಾಕುತ್ತಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಸಂಚಾರ ದಟ್ಟಣೆ, ಮೂಲಸೌಕರ್ಯ ಸಮಸ್ಯೆಗಳು ಮತ್ತು ಸಂಪರ್ಕದ ಸಮಸ್ಯೆಗಳನ್ನು ಇಂದು ಪ್ರಾರಂಭಿಸಲಾದ ಯೋಜನೆಗಳಿಂದ ಪರಿಹರಿಸಲಾಗುವುದು ಎಂದು ಹೇಳಿದರು.
40 ವರ್ಷಗಳ ಹಿಂದೆ ಕಲ್ಪಿಸಲಾದ ಉಪನಗರ ರೈಲು ಯೋಜನೆಯನ್ನು 40 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಮತ್ತು ರೈಲು, ರಸ್ತೆ ಮತ್ತು ವಿಮಾನ ಸಂಪರ್ಕದಿಂದ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಕಳೆದ ಎಂಟು ವರ್ಷಗಳಲ್ಲಿ ಕೈಗೊಂಡ ಸುಧಾರಣೆಗಳು ಮತ್ತು ಇತರ ಅಭಿವೃದ್ಧಿ ಕಾರ್ಯಗಳು ಈಗ ಫಲ ನೀಡುತ್ತಿವೆ ಎಂದರು.