ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗರಡಿಮಜಲು ಇಲ್ಲಿ ನಡೆಯಲಿದ್ದು ಉಡುಪಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಇವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ, ಬಾಹ್ಯ ಸ್ವಚ್ಚತೆ ಎಷ್ಟು ಪ್ರಾಮುಖ್ಯವೋ ಅಷ್ಟೇ ಆಂತರ್ಯದ ಸ್ವಚ್ಚತೆಯೂ ಪ್ರಾಮುಖ್ಯವಾಗಿದೆ.
ವಿದ್ಯೆಯೊಂದಿಗೆ ಮಾನವೀಯ ಸಂಬಂಧಗಳು, ಸಂಸ್ಕಾರವು ಬೆರೆತರೆ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ. ವಿದ್ಯಾರ್ಥಿಗಳಾದ ನೀವು ಈಗಿನಿಂದಲೇ ಸಮಾಜಕ್ಕೆ ಉಪಯುಕ್ತವಾಗುವ ಸಣ್ಣ ಸಣ್ಣ ಕಾರ್ಯಗಳನ್ನು ಮಾಡಬೇಕು. ಆ ಮೂಲಕ ಸಮಾಜದ
ಉತ್ತಮ ಆಸ್ತಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ದಯಾನಂದ ಶೆಟ್ಟಿ ಕೊಜಕುಳಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗರಡಿಮಜಲು ಇಲ್ಲಿನ ದೈಹಿಕ ಶಿಕ್ಷಕಿ ರತಿ, ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಸುಷ್ಮಾ ಟಿ ಹಾಗೂ ಡಾ. ಮಹೇಶ್ ಕುಮಾರ್ ಕೆ.ಇ. ಉಪಸ್ಥಿತರಿದ್ದರು.
ಶಿಬಿರಾರ್ಥಿ ಮನೀಷ್ ಸ್ವಾಗತಿಸಿ, ನಾಗಪ್ಪ ವಂದಿಸಿದರು. ಶಿಬಿರದ ವಿದ್ಯಾರ್ಥಿ ನಾಯಕಿ ಸುಷ್ಮಾ ನಿರೂಪಿಸಿದರು. ಏಳು ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ 100 ಶಿಬಿರಾರ್ಥಿಗಳು, ಧ್ವಜಾರೋಹಣ, ಚಿಂತನ ಮಂಥನ, ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.