ಉಡುಪಿ: ಹಲ್ಲೆ ನಡೆಸಿದ ಆರೋಪಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2015 ನವೆಂಬರ್ 29 ರಂದು ಸಂಜೆ 7 ಗಂಟೆ ಸುಮಾರಿಗೆ ಶಿವಕುಮಾರ್ ಕರಾವಳಿ ಜಂಕ್ಷನ್ ಬಳಿ ಇರುವ ಟೆಂಪೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರಿಗೆ ಕಲ್ಲಿನಿಂದ ಹಲ್ಲೆ ನಡೆಸಿದ ಹಿನ್ನೆಲೆ, ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ಶಿವಕುಮಾರ್‌ಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಹಾಗೂ 10000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ. ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿರುತ್ತಾರೆ.