ನವದೆಹಲಿ: ಜುಲೈ 24ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಚುನಾವಣಾ ಆಯೋಗ ಇಂದು ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಜುಲೈ 18ರಂದು ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಮತಎಣಿಕೆ ನಡೆಯಲಿದೆ ಎಂದರು.
ಭಾರತದಲ್ಲಿ ರಾಷ್ಟ್ರಪತಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನಗಳ ಚುನಾಯಿತ ಸದಸ್ಯರನ್ನು ಒಳಗೊಂಡ ಎಲೆಕ್ಟೋರಲ್ ಕಾಲೇಜಿನ ಸದಸ್ಯರು ಆಯ್ಕೆ ಮಾಡುತ್ತಾರೆ. ರಾಷ್ಟ್ರಪತಿ ಚುನಾವಣೆಯ ಎಲೆಕ್ಟೋರಲ್ ಕಾಲೇಜಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಮತ್ತು ರಾಜ್ಯ ವಿಧಾನಸಭೆಗಳು ಹಾಗೂ ದೆಹಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಇರುತ್ತಾರೆ.
ಈ ಬಾರಿ ಒಟ್ಟು 4809 ಮಂದಿ ಮತ ಚಲಾಯಿಸಲಿದ್ದು ಅವುಗಳಲ್ಲಿ 4033 ಶಾಸಕರು ಮತ್ತು 776 ಸಂಸದರು ಒಳಗೊಂಡಿದ್ದಾರೆ.