ಮಲ್ಪೆ: ಉಡುಪಿ ಜಿಲ್ಲಾ ಲೀಡ್ ಕಾಲೇಜಾದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಪ್ರಾಂಶುಪಾಲರಾಗಿ ಇತಿಹಾಸ ವಿಭಾಗ ಮುಖ್ಯಸ್ಥರಾದ ಡಾ. ಸುರೇಶ್ ರೈ ಕೆ ಇವರು ಇಂದು ಅಧಿಕಾರ ಸ್ವೀಕರಿಸಿದರು.
ಉಡುಪಿ ಜಿಲ್ಲೆಯ ಲೀಡ್ ಕಾಲೇಜೆಂದು ಹೆಗ್ಗಳಿಕೆ ಪಡೆದ ತೆಂಕನಿಡಿಯೂರು ಕಾಲೇಜು ಸರಕಾರಿ ಹಾಗೂ ಅನುದಾನಿತ ಕಾಲೇಜುಗಳ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಜಿಲ್ಲಾಡಳಿತಕ್ಕೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನು ಹೊಂದಿದ್ದು, ಈ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಪ ್ರಥಮವಾಗಿ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಆರಂಭಿಸಿದ ಕೀರ್ತಿಯನ್ನು ಹೊಂದಿದೆ.
ಇದೀಗ ಇಲ್ಲಿನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಡಾ. ಸುರೇಶ್ ರೈ ಕೆ ಇವರು ತಮ್ಮ 27 ವರ್ಷಗಳ ಸೇವಾ ಅವಧಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಹಾಗೂ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ಉತ್ತಮ ಎನ್.ಎಸ್.ಎಸ್ ಅಧಿಕಾರಿಯಾಗಿ, ನ್ಯಾಕ್ ಸಂಯೋಜಕರಾಗಿ, ಐ.ಕ್ಯೂ.ಎ.ಸಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದವರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಇವರ ಸಂಶೋಧನ ಲೇಖನಗಳು ಪ್ರಕಟವಾಗಿದ್ದು, 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರು ಪ್ರಕಟಿಸಿದ ಕೃತಿಗಳಲ್ಲಿ ಕೆಲವು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗಕ್ಕೆ ಪಠ್ಯ ಪುಸ್ತಕವಾಗಿ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಇವರು ಡಾ. ಜಗದೀಶ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಜುಡಿಶಿಯಲ್ ಸಿಸ್ಟಮ್ ಇನ್ ದಿ ಸೋಶಿಯಲ್ ಟ್ರೆಡಿಶನ್ ಆಪ್ ತುಳುನಾಡು’ ಎಂಬ ಸಂಶೋಧನಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.