ನವದೆಹಲಿ/ ಬೆಂಗಳೂರು: ಜೂನ್ 21 ರಂದು ಇಡೀ ವಿಶ್ವವೇ ಯೋಗ ದಿನ ಆಚರಿಸುತ್ತಿದೆ. ಯೋಗ ದಿನಾಚರಣೆ ಆರಂಭದಿಂದ ಕೋವಿಡ್ ಸಂದರ್ಭದಲ್ಲಿ ಹೊರತುಪಡಿಸಿ ಪ್ರತಿವರ್ಷವೂ ಪ್ರಧಾನಿ ನರೇಂದ್ರ ಮೋದಿ ಬೇರೆ ಬೇರೆ ಕಡೆಗಳಲ್ಲಿ ಬೃಹತ್ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ಬಾರಿ ಯೋಗ ದಿನದಂದು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಬಗ್ಗೆ ಪ್ರಧಾನಿ ಕಾರ್ಯಾಲಯ (ಪಿಎಂಒ) ದೃಢಪಡಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಪತ್ರ ಬರೆದಿದೆ.
ಯೋಗ ದಿನಾಚರಣೆಯಲ್ಲಿ ಭಾಗವಹಿಸುವಂತೆ ಸಂಸದ ಪ್ರತಾಪ್ ಸಿಂಹ ಕುಟುಂಬ ಸಮೇತರಾಗಿ ಪ್ರಧಾನಿಯನ್ನು ಭೇಟಿಯಾಗಿ ಆಹ್ವಾನ ನೀಡಿದ್ದರು.
ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಈ ಬಾರಿ ಯೋಗ ದಿನಾಚರಣೆಗೆ ಆಯುಷ್ ಸಚಿವಾಲಯ ಭರದ ಸಿದ್ಧತೆ ಆರಂಭಿಸಿದೆ. ಈ ಬಾರಿ ಸುಮಾರು 2 ಲಕ್ಷ ಮಂದಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.