ಮಲ್ಪೆ: ನಮ್ಮ ಸಮಕಾಲೀನ ಸವಾಲುಗಳು ಅತಿ ಸಂಕೀರ್ಣವಾಗಿದೆ. ನಮ್ಮ ಇಚ್ಛೆಗಳನ್ನು ನಿರ್ಧರಿಸುವವರು ನಾವಲ್ಲ. ಯಾವುದೋ ಬೇರೆ ವ್ಯವಸ್ಥೆ ಅದನ್ನು ನಿರ್ಧರಿಸುತ್ತದೆ, ಹಾಗೂ ನಮ್ಮ ಶಿಕ್ಷಣ ವ್ಯವಸ್ಥೆಯು ನಮ್ಮಲ್ಲಿ ಶ್ರೇಷ್ಠತೆಯ ವ್ಯಸನವನ್ನು ಉಂಟು ಮಾಡುವುದು ಈಗ ನಮ್ಮ ಮುಂದಿರುವ ಬಹುದೊಡ್ಡ ಸವಾಲುಗಳು ಎಂದು ಖ್ಯಾತ ರಂಗಕರ್ಮಿ ಡಾ. ಶ್ರೀಪಾದ್ ಭಟ್ ಹೇಳಿದರು.
ಅವರು ಉಡುಪಿ ಜಿಲ್ಲೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಇಂದು ಕಾಲೇಜು ಸಭಾಂಗಣದಲ್ಲಿ ನಡೆದ ದಿ. ಪುಳಿಮಾರು ಎಂ. ಕೃಷ್ಣ ಶೆಟ್ಟಿ ಸ್ಮಾರಕ ‘ಸಮಕಾಲೀನ ಸವಾಲುಗಳು’ ಎಂಬ ದತ್ತಿ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನು ಆಡಿದರು. ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್ ಎಚ್.ಪಿ. ಯವರು ದತ್ತಿ ಉಪನ್ಯಾಸದ ಮಹತ್ವವನ್ನು ವಿವರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ದತ್ತಿ ದಾನಿಗಳ ಕುಟುಂಬದ ಭವಾನಿ ವಿ. ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಚ್.ಕೆ. ವೆಂಕಟೇಶ್ ವಂದಿಸಿದರು.