ಉಡುಪಿ: ರಾಜ್ಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯದ ಕೊರತೆ ಉಂಟಾಗದಂತೆ ರಾಜ್ಯದ ವಿವಿಧ ಭಾಗದಲ್ಲಿ 1000 ವಿದ್ಯಾರ್ಥಿಗಳ ಸಾಮರ್ಥ್ಯದ, ತಲಾ 50 ಕೋಟಿ ರೂ. ವೆಚ್ಚದಲ್ಲಿ 5 ದೀನ ದಯಾಳ್ ಉಪಾಧ್ಯಾಯ ವಿದ್ಯಾರ್ಥಿನಿಲಯಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಂದು ಮಣಿಪಾಲದಲ್ಲಿ 4.24 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀಮತಿ ಇಂದಿರಾ ಗಾಂಧಿ ಮೆಟ್ರಿಕ್ ನಂತರದ ನರ್ಸಿಂಗ್ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ.ಜಾತಿ ಮತ್ತು ಪ.ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ವಿದ್ಯಾರ್ಥಿನಿಲಯದಲ್ಲಿ ವಸತಿ ಸೌಲಭ್ಯ ಒದಗಿಸಲು ದೀನ ದಯಾಳ್ ಉಪಾದ್ಯಾಯ ಹಾಸ್ಟೆಲ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯದ 5 ಕಡೆಗಳಲ್ಲಿ ಈ ಹಾಸ್ಟೆಲ್‌ಗಳ ನಿರ್ಮಾಣಕ್ಕೆ 250 ಕೋಟಿ ರೂ ವೆಚ್ಚವಾಗಲಿದೆ ಎಂದರು.
ವಿದ್ಯಾರ್ಥಿನಿಲಯಗಳಿಗೆ ಪ್ರತಿವರ್ಷ ಬೇಡಿಕೆ ಹೆಚ್ಚುತ್ತಿದ್ದು, ಈ ಬಾರಿ 3.5 ಕೋಟಿ ರೂ ವೆಚ್ಚದಲ್ಲಿ ರಾಜ್ಯದಲ್ಲಿ 50 ಕನಕದಾಸ ಹಾಸ್ಟೆಲ್ ಗಳ ನಿರ್ಮಾಣ ಮಾಡಲಿದ್ದು, ಪ.ಜಾತಿ ಮತ್ತು ಪಂಗಡದವರಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ 100 ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು. ಕರಾವಳಿ ಜಿಲ್ಲೆಗಳಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ಉಡುಪಿ, ಉತ್ತರಕನ್ನಡ, ದ.ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 29 ಕೋಟಿ ರೂ ವೆಚ್ಚದಲ್ಲಿ ವಸತಿಶಾಲೆ ನಿರ್ಮಾಣ ಮಾಡಲಾಗುವುದು ಎಂದರು.
ರಾಜ್ಯದ ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ 5 ಕೋಟಿ ರೂ ವೆಚ್ಚದಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಈ ವರ್ಷದಿಂದ ಆರಂಭಿಸಲಾಗುತ್ತಿದ್ದು, 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ಕರಾಟೆ ಕಲಿಸಲಾಗುವುದು.
ಹಾಸ್ಟೆಲ್ ನಲ್ಲಿನ ಬಾಲಕ ವಿದ್ಯಾರ್ಥಿಗಳಿಗೂ ಕರಾಟೆ ಕಲಿಸುವ ಚಿಂತನೆ ಇದ್ದು, ಹಾಸ್ಟೆಲ್ ಗಳಿಗೆ ನೀಡಲಾಗುವುದ ಊಟೋಪಚಾರದ ವೆಚ್ಚವನ್ನು ಹೆಚ್ಚಳ ಮಾಡಲಾಗುವುದು ಎಂದರು.
ಉಡುಪಿ ನಗರದಲ್ಲಿ 250 ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ 6.5 ಕೋಟಿ ವೆಚ್ಚದ ಹಾಸ್ಟೆಲ್ ನಿರ್ಮಾಣಕ್ಕೆ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದಕ್ಕೆ ಈಗಾಗಲೇ ಅಗತ್ಯ ಮಂಜೂರಾತಿ ಹಾಗೂ ಹಣಕಾಸು ಸೌಲಭ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿವರ್ಷ ಹಾಸ್ಟೆಲ್ ಗಳ ಬೇಡಿಕೆ ಅಧಿಕವಾಗಿದ್ದು, ಇನ್ನು 2 ವರ್ಷದಲ್ಲಿ ಜಿಲ್ಲೆಯಲ್ಲಿ ಅಗತ್ಯವಿರುವ ಸಂಖ್ಯೆಯ ಹಾಸ್ಟೆಲ್ ಗಳ ನಿರ್ಮಾಣ ಮಾಡಲಾಗುವುದು, ವಿದ್ಯಾರ್ಥಿಗಳು ಹಾಸ್ಟಲ್ ಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಶಿಸ್ತು ರೂಡಿಸಿಕೊಂಡು, ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್. ಕರ್ನಾಟಕ ಗೃಹ ಮಂಡಳಿಯ ಸಹಾಯಕ ಇಂಜಿನಿಯರ್ ಸಹನಾ ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಆಧಿಕಾರಿ ದೇವಿಂದ್ರ ಎಸ್ ಬಿರಾದರ್ ಸ್ವಾಗತಿಸಿದರು, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ ವಂದಿಸಿದರು.