ಉಡುಪಿ: ಭಾರತೀಯ ತತ್ವಶಾಸ್ತ್ರಕ್ಕೆ ಶ್ರೀ ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಹೇಳಿದರು. ಅವರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಂದು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಆಚಾರ್ಯ ಶಂಕರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
ಶ್ರೀ ಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು, ಹಿಂಧೂ ಧರ್ಮದ ಪುನರುತ್ಥಾನಕ್ಕಾಗಿ ಜನಿಸಿದ ಆಚಾರ್ಯ ಶಂಕರರು, ಭಕ್ತಿ ಸಿದ್ಧಾಂತದ ಮೂಲಕ ಐಕ್ಯಮತ್ಯ ಸಾಧಿಸಿದರು. ಉಪನಿಷತ್ ಪ್ರತಿಪಾದ್ಯವಾದ ಅದ್ವೈತ ತತ್ವವನ್ನು ಎತ್ತಿಹಿಡಿದು ದೇವನೊಬ್ಬ ನಾಮ ಹಲವು, ಆರಾಧನಾ ವಿಧಾನಗಳು ಬೇರೆ ಬೇರೆಯಾದರೂ ತಲುಪುವುದು ಒಬ್ಬರನಿಗೇ ಎಂದು ಸಾರಿದರು.
ಬ್ರಹ್ಮ ಸತ್ಯ ಜಗನ್ಮಿಥ್ಯ ಎಂದು ಸಾರುವ ಮೂಲಕ ಬ್ರಹ್ಮ ಒಂದೇ ಸತ್ಯ, ಜಗತ್ತು ಮಿಥ್ಯವಾದುದು ಎಂದರು. ಅಹಂ ಬ್ರಹ್ಮಾಸ್ಮಿ ಎಂದು ಹೇಳುವ ಮೂಲಕ ಪ್ರತಿಯೊಬ್ಬನಲ್ಲೂ ದೈವತ್ವವನ್ನು ಕಂಡು ಜಾತಿ ಬೇಧ ಖಂಡಿಸಿದ್ದರು. ಪಂಚಾಯತನ ಪೂಜಾ ಕ್ರಮ ರೂಢಿಗೆ ತಂದರು. ಮುಕ್ತಿ ಪಡೆಯಲು ಪ್ರತಿಯೊಬ್ಬರಿಗೂ ಅವಕಾಶವಿದ್ದು ನಿಷ್ಕಲ್ಮಷ ಭಕ್ತಿಯನ್ನು ಕರ್ತವ್ಯ ಪ್ರಜ್ಞೆಯಿಂದ ಮಾಡುವಂತೆ ಉಪದೇಶಿಸಿದ ಶ್ರೀ ಶಂಕರಾಚಾರ್ಯರು ವೇದ ಉಪನಿಷತ್ ಗೀತೆಗಳಿಗೆ ಭಾಷ್ಯ ಬರೆದು ಜಗದ್ಗುರು ಎಂದು ಕರೆಸಿಕೊಂಡರು.
ಕೇಂದ್ರ ಸರ್ಕಾರ ಶಂಕರಾಚಾರ್ಯರ ಜಯಂತಿಯನ್ನು ತತ್ವಜ್ಣಾನಿಗಳ ದಿನ ಎಂದು ಘೋಷಿಸಿರುವುದು ಯುಕ್ತವಾಗಿದೆ ಎಂದರು. ಸಾಮಾನ್ಯರೂ ಆಧ್ಯಾತ್ಮದ ಹಾದಿಯಲ್ಲಿ ಸಾಗಲು ಶ್ಲೋಕಗಳನ್ನು ರಚಿಸಿದರು. ದೇಶದ ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠ ಸ್ಥಾಪಿಸಿ, ಯತಿಗಳನ್ನು ನಿಯೋಜಿಸಿ ವೈದಿಕ ಮಾರ್ಗ ಪ್ರವರ್ತಕರಾದರು. ತಮ್ಮ 32ನೇ ವಯಸ್ಸಿನಲ್ಲಿ ಕೇದಾರ ಕ್ಷೇತ್ರದಲ್ಲಿ ಅಂತರ್ಧಾನರಾದರು. ಶಂಕರಾಚಾರ್ಯರು ನೀಡಿದ ಭಕ್ತಿ ಸಂದೇಶ ಸಾರ್ವಕಾಲಿಕ ಎಂದರು.
ಉಡುಪಿ ತಹಶೀಲ್ದಾರ್ ಅರ್ಚನಾ ಭಟ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ ನಿರೂಪಿಸಿ ವಂದಿಸಿದರು.