ಬ್ರಹ್ಮಾವರ : ಸನಾತನ ಫೌಂಡೇಶನ್ (ರಿ.) ಕೋಟ ನೇತೃತ್ವದಲ್ಲಿ ನಡೆದ ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೌರಿಗದ್ದೆ ಅವಧೂತ ವಿನಯ ಗುರೂಜಿಯವರು, ಸನಾತನ ಫೌಂಡೇಶನ್ ಕೋಟ(ರಿ.) ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ಸಂಘಟಿಸಿ 20 ಕಿಲೋಮೀಟರ್ ವ್ಯಾಪ್ತಿಯಿಂದ ಮಂದಾರ್ತಿಯ ದುರ್ಗಾಪರಮೇಶ್ವರಿ ಅಮ್ಮನೆಡೆಗೆ ಭಕ್ತಿಯಿಂದ ಪಾದಯಾತ್ರೆಯ ಮೂಲಕ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬರುವಂತೆ ಮಾಡಿರುವುದು ತುಂಬ ಸಂತೋಷದ ವಿಷಯ.
ಇಂದಿನ ಕಾಲಮಾನದಲ್ಲಿ ನಮ್ಮ ಸಂಪ್ರದಾಯವನ್ನು ಮುರಿದು ಪಾಶ್ಚಿಮಾತ್ಯ ಜೀವನಶೈಲಿಗೆ ಜನರು ಮಾರು ಹೋಗುತ್ತಿರುವ ಸಂದರ್ಭದಲ್ಲಿ ನೀವೊಂದಷ್ಟು ಜನ ಪಾದಯಾತ್ರೆಯ ಮೂಲಕ ದೇವಸ್ಥಾನಕ್ಕೆ ಬಂದಿರುವುದು ತುಂಬ ಖುಷಿಯ ವಿಚಾರ.
ಅದರಲ್ಲೂ ನಿಮ್ಮೆಲ್ಲರನ್ನು ಸಂಘಟಿಸಿ ಈ ಕಾರ್ಯಕ್ರಮ ಆಯೋಜನೆ ಮಾಡಿದ ಸನಾತನ ಫೌಂಡೇಶನ್ (ರಿ.) ಕೋಟದ ಎಲ್ಲಾ ಸಂಚಾಲಕರಿಗೂ ಅಭಿನಂದನೆಗಳು ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಸನಾತನ ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಹಿಳೆಯರ ಜಾಗೃತಿಯೊಂದೇ ದಾರಿ.
ಮನೆಯಲ್ಲಿ ಇರುವ ಮಹಿಳೆ ಒಬ್ಬಳು ಹಿಂದೂ ಧರ್ಮದ ಕುರಿತು ಜಾಗೃತಳಾದರೆ ಆ ಮನೆ ಹಿಂದೂ ಧರ್ಮದ ಕುರಿತು ಜಾಗೃತವಾದಂತೆ. ಸನಾತನ ಫೌಂಡೇಶನ್ (ರಿ.) ಕೋಟ ನನಗೆ ಇಂದು ಉಡುಗೊರೆಯಾಗಿ ನೀಡಿದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಮನೆ ಮನೆಗೂ ನೀಡುವಂತಾಗಲಿ ಎಂದು ಹಾರೈಸಿದರು.
ಸನಾತನ ಫೌಂಡೇಶನ್(ರಿ.) ಕೋಟ ಆಯೋಜಿಸಿದ ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಂದಾರ್ತಿಯ ಸುತ್ತ ಮುತ್ತಲಿನ 20 ಕಿಲೋಮೀಟರ್ ವ್ಯಾಪ್ತಿಯಿಂದ ಜನರು ಭಕ್ತಿಯಿಂದ ಪಾದಯಾತ್ರೆಯ ಮೂಲಕ ಬಂದು ಶ್ರೀ ದೇವರ ದರ್ಶನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂದಾರ್ತಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಎಚ್ ಧನಂಜಯ ಶೆಟ್ಟಿಯವರು ವಹಿಸಿದ್ದರು.
ಸನಾತನ ಫೌಂಡೇಶನ್ (ರಿ.) ಕೋಟ ಅಧ್ಯಕ್ಷರಾದ ಪ್ರಕಾಶ ಹಂದಟ್ಟು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನಾತನ ಫೌಂಡೇಶನ್ (ರಿ.) ಕೋಟ ಇದರ ಸಂಚಾಲಕರಾದ ಪೂಜಾ ವಂದಿಸಿ, ರಜನಿ ಕಾರ್ಯಕ್ರಮ ನಿರೂಪಿಸಿದರು.