ಬೆಂಗಳೂರು: ರಸಗೊಬ್ಬರ ದರದ ಮೇಲಿನ ರಿಯಾಯ್ತಿ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಅದರಂತೆ ಇದೀಗ ರಸಗೊಬ್ಬರದ ಮೇಲಿನ ರಿಯಾಯ್ತಿ ದರವನ್ನು ಹೆಚ್ಚಿಸಲಾಗಿದೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಈ ಕುರಿತು ಮಾಹಿತಿ ನೀಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ 2022-23ನೇ ಸಾಲಿನ ಆರಂಭದಲ್ಲಿಯೇ ಕೇಂದ್ರ ಸರ್ಕಾರ ರಸಗೊಬ್ಬರಗಳಿಗೆ ರಿಯಾಯ್ತಿ ದರ ಹೆಚ್ಚಿಸಿದೆ. ಪ್ರತಿ 50 ಕೆಜಿ ಚೀಲದ ಡಿಎಪಿ ಗೊಬ್ಬರದ ಒಟ್ಟು ಬೆಲೆ ರೂ.3,850.65 ಇದ್ದು, ರೈತರು ರೂ.1,350ಗೆ ಖರೀದಿ ಮಾಡುತ್ತಿದ್ದು, ಉಳಿದ ರೂ.2500.65 ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.
50 ಕೆ.ಜಿ ಚೀಲದ ಎಂ.ಓಪಿ ಗೊಬ್ಬರದ ಒಟ್ಟು ಬೆಲೆ ರೂ 2,459 ಇದ್ದು, ರೈತರು ರೂ 1700ಗೆ ಖರೀದಿ ಮಾಡುತ್ತಿದ್ದಾರೆ. ಉಳಿದ ರೂ 759.3ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ. 50 ಕೆ.ಜಿ ಚೀಲದ ಕಾಂಪ್ಲೆಕ್ಸ್ ಗೊಬ್ಬರದ ಒಟ್ಟು ಬೆಲೆ ರೂ 3204.45 ಅಗಿದ್ದು, ರೈತರು ರೂ 1470ಕ್ಕೆ ಖರೀದಿ ಮಾಡುತ್ತಿದ್ದು, ಉಳಿದ ರೂ 1734.45ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.
45 ಕೆ.ಜಿ ಚೀಲದ ಯೂರಿಯಾ ಗೊಬ್ಬರದ ಒಟ್ಟು ಬೆಲೆ ರೂ.1,666 ಇದ್ದು, ರೈತರು ರೂ.266ಕ್ಕೆ ಖರೀದಿ ಮಾಡುತ್ತಿದ್ದಾರೆ. ಉಳಿದ ರೂ 1400ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.