ಉಡುಪಿ: ಯಾವುದೇ ಖಾಯಿಲೆ ಬಂದ ಬಳಿಕ ಅದಕ್ಕೆ ಚಿಕಿತ್ಸೆ ನೀಡುವ ಬದಲು ಅದು ಬರದಂತೆ ತಡೆಗಟ್ಟಲು ಸುರಕ್ಷತಾ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ. ಇಂದಿನ ದಿನಗಳಲ್ಲಿ ವ್ಯಾಪಕವಾಗಿರುವ ಸ್ತನ ಕ್ಯಾನ್ಸರ್ ನಂತಹ ಖಾಯಿಲೆಗಳನ್ನು ಬೇಗನೆ ಪತ್ತೆ ಹಚ್ಚಿದಲ್ಲಿ ಅದರ ಚಿಕಿತ್ಸೆ ಸುಲಭ ಸಾಧ್ಯ, ಮಾತ್ರವಲ್ಲದೆ ಪೂರ್ತಿಯಾಗಿ ಗುಣಪಡಿಸಿ ರೋಗಿಯನ್ನು ಪ್ರಾಣಾಪಾಯದಿಂದ ರಕ್ಷಿಸಬಹುದು ಎಂದು ಪ್ರಸಿದ್ಧ ಸ್ತ್ರೀ ರೋಗ ನಿವಾರಣಾ ತಜ್ಞೆ ಡಾ. ರಾಜಲಕ್ಷ್ಮಿ ಅಭಿಪ್ರಾಯಪಟ್ಟರು.
ಉಡುಪಿ ಅಂಚೆ ಕಚೇರಿಯ ವಿಭಾಗೀಯ ತರಬೇತಿ ಕೇಂದ್ರದಲ್ಲಿ ಉಡುಪಿ ಅಂಚೆ ವಿಭಾಗದ ವತಿಯಿಂದ ಆಯೋಜಿಸಿದ್ದ ಸ್ತ್ರೀ ಆರೋಗ್ಯ ಜಾಗೃತಿ ಶಿಬಿರದಲ್ಲಿ ಸ್ತನ ಕ್ಯಾನ್ಸರ್ ರೋಗ ಲಕ್ಷಣ, ತಡೆಗಟ್ಟುವಿಕೆ ಹಾಗೂ ಪರಿಹಾರ ಬಗ್ಗೆ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮಹಿಳೆಯರು ಮನೆ ಮಂದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ತನ್ನ ಸ್ವಾಸ್ಥ್ಯದ ಬಗ್ಗೆಯೂ ಜಾಗೃತರಾಗಿರಬೇಕು ಎಂದು ಹೇಳಿದರು. ಭಾರತೀಯ ಅಂಚೆ ಇಲಾಖೆ, ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರ ಮುತುವರ್ಜಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂಚೆ ಇಲಾಖಾ ಸಿಬ್ಬಂದಿ ಸವಿತಾ ಶೆಟ್ಟಿಗಾರ್ ಸ್ವಾಗತಿಸಿ ಆಶಾಲತಾ, ಲೀಲಾವತಿ ಪ್ರಾರ್ಥನೆ ನಡೆಸಿಕೊಟ್ಟರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಉಡುಪಿ ಅಂಚೆ ವಿಭಾಗದ ಮಹಿಳಾ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರ ನಡೆಸಿಕೊಟ್ಟ ಡಾ. ರಾಜಲಕ್ಷ್ಮಿಯವರನ್ನು ಇಲಾಖಾ ವತಿಯಿಂದ ಸನ್ಮಾನಿಸಲಾಯಿತು.