ಲಕ್ನೌ: ಸರ್ಕಾರಿ ಕೆಲಸಗಳಲ್ಲಿ ಕುಟುಂಬ ಸದಸ್ಯರ ಹಸ್ತಕ್ಷೇಪ ಆಗದಂತೆ ಎಲ್ಲ ಸಚಿವರು ನಿಗಾ ವಹಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ಇಂದು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸರ್ಕಾರದ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
ನಂತರ ಮಾತನಾಡಿದ ಅವರು, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಸಾರ್ವಜನಿಕ ಪ್ರತಿನಿಧಿಗಳ ನಡವಳಿಕೆ ಬಹಳ ಮುಖ್ಯ.
ಎಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಂದಿನ ಮೂರು ತಿಂಗಳ ಅವಧಿಯಲ್ಲಿ ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಸಾರ್ವಜನಿಕ ಘೋಷಣೆ ಮಾಡಬೇಕು.
ಎಲ್ಲಾ ಸರಕಾರಿ ನೌಕರರು ತಮ್ಮ ಮತ್ತು ಕುಟುಂಬದ ಸದಸ್ಯರ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಘೋಷಣೆಯನ್ನು ಮಾಡಬೇಕು. ಈ ವಿವರಗಳನ್ನು ಸಾರ್ವಜನಿಕರ ಅವಲೋಕನಕ್ಕಾಗಿ ಆನ್‌ಲೈನ್ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು. ಸೋಮವಾರ ಮತ್ತು ಮಂಗಳವಾರ ರಾಜ್ಯ ರಾಜಧಾನಿ ಲಕ್ನೋದಲ್ಲಿಯೇ ಇರುವಂತೆ ಮುಖ್ಯಮಂತ್ರಿ ಎಲ್ಲಾ ಸಚಿವರಿಗೆ ಸೂಚಿಸಿದ್ದಾರೆ.