ಮಂಗಳೂರು: ಕಾಲೇಜೊಂದರ ಪ್ರಾಧ್ಯಾಪಕಿಯ ಬಗ್ಗೆ ಮಾನಹಾನಿಕರ ಪತ್ರ ಮತ್ತು ಪೋಸ್ಟರ್ ರಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಂಚಿ ಪ್ರಾಧ್ಯಾಪಕಿಯ ತೇಜೋವಧೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿಯ ಪ್ರಕಾಶ್ ಶೆಣೈ(44), ಸಿದ್ದಕಟ್ಟೆಯ ಪ್ರದೀಪ್ ಪೂಜಾರಿ (36) ಮತ್ತು ಉಡುಪಿಯ ತಾರನಾಥ ಶೆಟ್ಟಿ (32) ಬಂಧಿತರು. ಬಂಧಿತರಲ್ಲಿ ಓರ್ವರು ಕಾಲೇಜೊಂದರ ಕರೆಸ್ಪಾಂಡೆಂಟ್, ಓರ್ವ ಉಪನ್ಯಾಸಕ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು, ಕಾಲೇಜಿನಲ್ಲಿ ನೇಮಕಾತಿ ವಿಚಾರದಲ್ಲಿ ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರಲ್ಲಿ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. ಆರೋಪಿಗಳು ಪ್ರಾಧ್ಯಾಪಕಿಯ ಮಾನಹಾನಿಕರ ಪೋಸ್ಟರ್ ಸೃಷ್ಟಿಸಿ ಆಕೆಯ ಸಂಪರ್ಕ ವಿವರಗಳು ಮತ್ತು ಇಮೇಲ್ ಐಡಿಯನ್ನು ಅದಕ್ಕೆ ಸೇರಿಸಿದ್ದರು.
ಆರೋಪಿಗಳು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳು, ಪ್ರಾಂಶುಪಾಲರು, ಉಪನ್ಯಾಸಕರಿಗೆ ಪ್ರಾಧ್ಯಾಪಕಿಯ ಕುರಿತು ಆಕ್ಷೇಪಾರ್ಹ ಮತ್ತು ನಿಂದನೀಯ ವಿಷಯವಿರುವ ಇನ್‌ಲ್ಯಾಂಡ್ ಪತ್ರವನ್ನು ಕಳುಹಿಸಿದ್ದಾರೆ.
ಆರೋಪಿಗಳು ಪ್ರಾಧ್ಯಾಪಕಿಯ ಭಾವಚಿತ್ರವಿರುವ ಪೋಸ್ಟರ್ ರಚಿಸಿ ಅದರಲ್ಲೂ ಅವರ ತೇಜೋವಧೆಯ ವಿಚಾರಗಳನ್ನು ರಚಿಸಿ ಮೊಬೈಲ್ ಸಂಖ್ಯೆಯನ್ನೂ ಮುದ್ರಿಸಿ ಸುಳ್ಯ, ಸಂಪಾಜೆ, ಚಿಕ್ಕಮಗಳೂರು, ಸುಬ್ರಹ್ಮಣ್ಯ, ಮೂಡಿಗೆರೆ, ಮಡಿಕೇರಿ, ಮೈಸೂರು, ಬಾಳೆಹೊನ್ನೂರು, ಶಿವಮೊಗ್ಗ ಸಹಿತ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣ, ಶೌಚಾಲಯಗಳಲ್ಲಿ ಅಂಟಿಸಿದ್ದರು.
ಇದರಿಂದ ಪ್ರಾಧ್ಯಾಪಕಿಯವರಿಗೆ ಹಲವಾರು ಕರೆಗಳು ಬಂದಿದ್ದು ಅಶ್ಲೀಲ ಕಾಮೆಂಟ್ ಗಳು ಅವರ ಇ-ಮೇಲ್ ಗೆ ಬಂದಿದೆ. ಇದರಿಂದ ಪ್ರಾಧ್ಯಾಪಕಿ ಮಾನಸಿಕ ಕಿರುಕುಳ ಅನುಭವಿಸಿದ್ದರು ಎಂದು ಪೊಲೀಸ್ ಕಮೀಷನರ್ ಹೇಳಿದರು. ಪ್ರಾಧ್ಯಾಪಕಿ ಮೂರು ರಾಜ್ಯ ಪ್ರಶಸ್ತಿ, 35 ವರ್ಷದ ಬೋಧನಾ ಅನುಭವ ಮತ್ತು ಯುಜಿಸಿ ಅನುಸಾರವಾಗಿ ಪಿ.ಹೆಚ್.ಡಿ ಮಾಡಿದ್ದಾರೆ.
ಡಿಸಿಪಿ ಹರಿರಾಮ್ ಶಂಕರ್, ಸಿ.ಎನ್.ಇ ಅಪರಾಧ ವಿಭಾಗದ ಸತೀಶ್, ಹರೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.