ಉಡುಪಿ: ಕಾಪುವಿನ ಇನ್ನಂಜೆ ಗ್ರಾಮದ ಕುಂಜರ್ಗದಲ್ಲಿ ರಾಜೇಂದ್ರ ಪ್ರಭು ಅವರ ಗದ್ದೆಯ ಬದುವಿನಲ್ಲಿರುವ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ- ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯರವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ನಡೆಸಿರುತ್ತಾರೆ.
ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನದಲ್ಲಿ ಗೋಚರಿಸುವ 28 ಸಾಲುಗಳಲ್ಲಿ ಹೆಚ್ಚಿನ ಅಕ್ಷರಗಳು ತ್ರುಟಿತಗೊಂಡಿದ್ದು, ಶಾಸನದ ಕೆಳ ಭಾಗವು ನೆಲದಲ್ಲಿ ಹುದುಗಿರುವುದರಿಂದ ಉಳಿದ ಸಾಲುಗಳನ್ನು ಓದಲು ಸಾಧ್ಯವಾಗಿಲ್ಲ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವಿದ್ದು ಇದರ ಎಡಭಾಗದಲ್ಲಿ ಬಸವನ ಉಬ್ಬು ಕೆತ್ತನೆಯಿದೆ.
ಸ್ವಸ್ತಿ ಶ್ರೀಮತು ಎಂದು ಪ್ರಾರಂಭವಾಗುವ ಈ ಶಾಸನದಲ್ಲಿ ಕಾಲಮಾನ ಅಳಿಸಿ ಹೋಗಿದೆ.
ಶಾಸನವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಗುರುವಾರ, ಮಂಗಳೂರು ರಾಜ್ಯ ಹಾಗೆಯೇ ತ್ರಿವಿಕ್ರಮ, ಮಹೇಶ್ವರ ಕಾಪಿಂದ, ಹಡಪದ ಸಾವಣ, ನಾಕೂರ ಎರಡು ಬಳಿಯ, ಅರಸಿಂಗೆ ಗದ್ಯಾಣ 10ನು… ಎಂಬ ಇನ್ನೂ ಮುಂತಾದ ಪದಗಳ ಉಲ್ಲೇಖ ಕಂಡುಬರುತ್ತದೆ. ಲಿಪಿಯ ಆಧಾರದ ಮೇಲೆ ಈ ಶಾಸನವು ಸುಮಾರು 14 ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧನಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ, ಕೆ. ಶ್ರೀಧರ್ ಭಟ್ ಮತ್ತು ರವಿ ಸಂತೋಷ್ ಆಳ್ವ ಅವರು ಸಹಕಾರ ನೀಡಿರುತ್ತಾರೆ.