ಫೀನಿಕ್ಸ್: ಲೋಕ ಕಲ್ಯಾಣಾರ್ಥವಾಗಿ ಅಮೆರಿಕಾದ ಫೀನಿಕ್ಸ್ ನಗರದ ಪುತ್ತಿಗೆ ಮಠದಲ್ಲಿ ಏಪ್ರಿಲ್ 11 ರಂದು ಆರಂಭಗೊಂಡ ಶತಚಂಡಿಕಾಯಾಗವು ಏಪ್ರಿಲ್ 16 ರಂದು ಪೂರ್ಣಾಹುತಿ ಮೂಲಕ ಸಂಪನ್ನಗೊಂಡಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂಕಲ್ಪದಂತೆ ಜರಗಿದ ಈ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
10 ಋತ್ವಿಜರಿಂದ 100 ಪಾರಾಯಣ, ಒಂದು ಲಕ್ಷ ನವಾಕ್ಷರಿ ಮಂತ್ರ ಜಪ, ಹತ್ತು ಸಾವಿರ ಆಜ್ಯ ಹೋಮ ಮೂಲಕ ಶತಚಂಡಿಕಾಯಾಗ ನೆರವೇರಿತು. ಶತ ಚಂಡಿಕಾ ಯಾಗಕ್ಕೆ 70 ಕೆಜಿ ಪರಮಾನ್ನ ಬಳಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀನಿವಾಸ ದೇವರಿಗೆ ಹಾಗೂ ಶ್ರೀ ದುರ್ಗೆಗೆ ಕುಂಭಾಭಿಷೇಕ ಜರಗಿತು.
ಧಾರ್ಮಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಆಶೀರ್ವದಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಲೋಕದಲ್ಲಿ ಇಂದು ಸುಖ, ಶಾಂತಿ ಸಮೃದ್ಧಿಗೆ ವಿಪರೀತ ಬೇಡಿಕೆ ಇದೆ. ಈ ಮೂರು ಪ್ರಾಪ್ತವಾಗಬೇಕಾದರೆ ಶ್ರೀದೇವಿಗೆ ಶರಣು ಹೋಗಬೇಕು, ಅರಾಧಿಸಬೇಕು. ಈ ಹಿನ್ನಲೆಯಲ್ಲಿ ಲೋಕದಲ್ಲಿ ಶಾಂತಿ ನೆಲಸುವ ಉದ್ದೇಶದಿಂದ ಫೀನಿಕ್ಸ್ ನಗರದಲ್ಲಿ ಶತಚಂಡಿಕಾ ಯಾಗವನ್ನು ಆಯೋಜಿಸಲಾಯಿತು ಎಂದು ಹೇಳಿದರು.
ಅಮೇರಿಕಾದ ನಾಗರಿಕರಿಗೆ ದೈವ ಭಕ್ತಿ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಅಮೆರಿಕೆಯ ಈ ಪ್ರದೇಶ ಅರಿಜೋನಾ ಹರಿ ಜೋನ್ ಆಗಲಿ. ಟೆಂಪೆ ಟೆಂಪಲ್ ಆಗಲಿ. ಪ್ರೀಸ್ಟ್ ಸ್ಟ್ರೀಟ್ ಪುರೋಹಿತರ ಬೀದಿಯಾಗಲಿ ಎಂದೂ ಅನುಗ್ರಹಿಸಿದರು. ವಿಷ್ಣು ಚಕ್ರಾಬ್ಜ್ಯ ಪೂಜೆಯೊಂದಿಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಪ್ರಧಾನ ಅರ್ಚಕರಾದ ಕಿದಿಯೂರು ರಾಮದಾಸ್ ಭಟ್, ಶ್ರೀಕಾಂತ್ ಸಾಮಗ, ರಾಘವೇಂದ್ರ ಕೊಡಂಚ, ಅಮೆರಿಕೆಯ 9 ಮಠಗಳ ಪ್ರಧಾನ ಅರ್ಚಕರು ಟೆಂಪೆ ನಗರದ ಮೇಯರ್ ಅವರ ಪ್ರತಿನಿಧಿ ಪ್ಯಾರಿಷ್ ಸ್ಪಿಟ್ಜ್, ಫಿನಿಕ್ಸ್ ಪುತ್ತಿಗೆ ಮಠದ ಶ್ರೀ ವೆಂಕಟೇಶ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ ರಾವ್, ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ ಉಪಸ್ಥಿತರಿದ್ದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಮೆರಿಕೆದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಉಡುಪಿ ಶೈಲಿಯಲ್ಲಿ ಬಾಳೆಎಲೆಯಲ್ಲಿ ಮಾಹಾ ಪ್ರಸಾದ ಸ್ವೀಕರಿಸಿದರು.