ಉಡುಪಿ: ಉಡುಪಿ ಜಿಲ್ಲೆಯ 1400 ವರ್ಷ ಇತಿಹಾಸವಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರಗೊಳ್ಳುತ್ತಿದ್ದು ಮೇ 3 ರಿಂದ ಮೇ 10ರ ತನಕ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ.
ಬ್ರಹ್ಮಕಲಶೋತ್ಸವದ ಪೂರ್ವಬಾವಿಯಾಗಿ ಸಮಸ್ತ ಕಡಿಯಾಳಿ ಗ್ರಾಮದ ಮನೆ ಮನೆಗಳಲ್ಲಿ ಗ್ರಾಮ ಭಜನೆ ಎಂಬ ವಿನೂತನ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 02 ಶನಿವಾರ ಚಾಂದ್ರಮಾನ ಯುಗಾದಿಯ ಪರ್ವ ಕಾಲದಲ್ಲಿ ಸಂಜೆ 4.00 ಗಂಟೆಗೆ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಮತ್ತು ದೇವಳದಲ್ಲಿ ಭಜನೆ ಪ್ರಾರಂಭಿಸಿದ ಉಪಾಧ್ಯ ಕುಟುಂಬಸ್ಥರು, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಆಚಾರ್ಯ ಉಪಸ್ಥಿತರಿರುವವರು.
ಕಡಿಯಾಳಿ ಗ್ರಾಮದ ಸುಮಾರು 1600 ಮನೆಗಳಿಗೆ ಐದು ತಂಡ ರಚನೆ ಮಾಡಿ ತಲಾ 12 ಜನರ ತಂಡ ಮನೆ ಮನೆಗೆ ತೆರಳಿ ದಿನನಿತ್ಯ ಭಜನೆ ನಡೆಸಲಿದ್ದಾರೆ.
ಈ ಭಜನೆಗೆ ತಂಡಕ್ಕೆ ಕಾತ್ಯಾಯನಿ, ಪಾರ್ವತಿ, ನಾರಾಯಣಿ, ಶಾಂಭವಿ, ಮತ್ತು ಭೈರವಿ ಎಂದು ನಾಮಕರಣ ಮಾಡಿದ್ದು ಇವರು ದಿನನಿತ್ಯವೂ ತಲಾ 12 ರಿಂದ 15 ಮನೆಗಳಲ್ಲಿ ಭಜನೆ ಪೂರೈಸಲಿದೆ.
ಈ ರೀತಿಯಾಗಿ ಬ್ರಹ್ಮಕಲಶೋತ್ಸವದ ಮುಂಚಿತವಾಗಿ ಸಮಸ್ತ ಗ್ರಾಮದ ಮನೆ ಮನೆಗಳಲ್ಲಿಯೂ ಭಜನೆ ಕಾರ್ಯಕ್ರಮ ನಡೆಯಲಿದೆ.
ಗ್ರಾಮಸ್ಥರು ತಮ್ಮ ಮನೆಯ ತುಳಸಿ ಕಟ್ಟೆಯಲ್ಲಿ ದೀಪ ಇಟ್ಟಿರಬೇಕು. ಈ ಭಜನಾ ತಂಡವು ಮನೆ ಮನೆಗೆ ಭಜನಾ ಪುಸ್ತಕ ಮತ್ತು ಶ್ರೀ ದೇವರ ಪ್ರಸಾದ ನೀಡಲಿದೆ.
ಪ್ರತಿಯೊಂದು ಮನೆಯಿಂದ ಇಬ್ಬರಂತೆ ಸೇರಿ ಏಪ್ರಿಲ್ 28ರಂದು ಭಜನಾ ಮಂಗಲೋತ್ಸವ ವಿಶಿಷ್ಟವಾಗಿ ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಂಜುನಾಥ್ ಹೆಬ್ಬಾರ್, ಗ್ರಾಮ ಭಜನೆಯ ಮುಖ್ಯಸ್ಥರಾದ ಜೀವರತ್ನ ದೇವಾಡಿಗ, ಸುಮಲತಾ ಉದಯ್, ಶಕುಂತಲಾ ಶೆಟ್ಟಿ, ಗೀತಾ ನಾಯಕ್, ಅಶ್ವಿನಿ ಪೈ, ಉಪಸ್ಥಿತರಿದ್ದರು.
ಕಡಿಯಾಳಿಗೆ ಭಜನೆ ನಂಟು:
1960ರಲ್ಲಿ, ದೇವಳದ ಅರ್ಚಕ ವಿದ್ವಾನ್ ಕಡಿಯಾಳಿ ರಾಮಚಂದ್ರ ಉಪಾಧ್ಯ ಇವರಿಂದ ಪ್ರಾರಂಭವಾದ ಭಜನೆ, ನಗರ ಭಜನೆ ನಿರಂತರವಾಗಿ ಇಂದಿಗೂ ನಡೆದುಕೊಂಡು ಬರುತ್ತಿದೆ.
ದೇವಳದಲ್ಲಿ ದಿನನಿತ್ಯ ಸಾಯಂಕಾಲ ಭಜನೆ, ವಾರ್ಷಿಕ ಉತ್ಸವದ ಸಂದರ್ಭದಲ್ಲಿ ನಗರ ಭಜನೆ ನಡೆಯುವುದು.