ಉಡುಪಿ: ಭೌಗೋಳಿಕ ಮಾನ್ಯತೆ ಇರುವ ಹಾಗೂ ಉಡುಪಿಯ ಹೆಮ್ಮೆಯ ಪ್ರತೀಕವಾದ ಉಡುಪಿ ಸೀರೆಯ ಪ್ರಾಮುಖ್ಯತೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಭಾರತೀಯ ಅಂಚೆ ಇಲಾಖೆ ಉಡುಪಿ ಸೀರೆಯ ವಿಶೇಷ ಅಂಚೆ ಲಕೋಟೆಯನ್ನು ಹೊರತಂದಿದ್ದು ಅದನ್ನು ಉಡುಪಿ ಅಂಚೆ ವಿಭಾಗದಲ್ಲಿ ಬಿಡುಗಡೆಗೊಳಿಸಲು ತುಂಬ ಸಂತಸವಾಗುತ್ತದೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಪ್ರಧಾನ ಅಂಚೆ ಕಚೇರಿಯ ಎರಡನೇ ಮಹಡಿಯಲ್ಲಿ ಉಡುಪಿ ಸೀರೆ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಮಾತನಾಡುತ್ತಾ, ಹಲವು ವರುಷಗಳ ಹಿಂದೆ ಪದ್ಮಶಾಲಿ ಕುಟುಂಬದವರು ಮಾತ್ರವಲ್ಲದೆ ಇತರ ಜನರೂ ಕೂಡಾ ಅಧಿಕ ಸಂಖ್ಯೆಯಲ್ಲಿ ಉಡುಪಿ ಸೀರೆ ಹಾಗೂ ಕೈ ಮಗ್ಗದ ಸೀರೆಗಳನ್ನು ನೇಯುತ್ತಲಿದ್ದು ಇತ್ತೀಚಿನ ದಿನಗಳಲ್ಲಿ ಕೈ ಮಗ್ಗದ ಸೀರೆಗಳನ್ನು ನೇಯುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದ್ದು ಬೆರಳೆಣಿಕೆಯ ಹಿರಿಯರಷ್ಟೇ ಈ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದು ಉಡುಪಿ ಸೀರೆಯ ನೇಯ್ಗೆ ಕಾಯಕಕ್ಕೆ ಪುನಃಶ್ಚೇತನ ನೀಡಬೇಕಾಗಿದೆ ಎಂದರು.
ಇವತ್ತಿಗೂ ನೇಯ್ಗೆ ಕೆಲಸ ನಡೆಸುತ್ತಿರುವ ಹಿರಿಯ ನೇಕಾರರಾದ ಮಂಜುನಾಥ ಶೆಟ್ಟಿಗಾರ್ ರವರನ್ನು ಉಡುಪಿ ಅಂಚೆ ವಿಭಾಗದ ವತಿಯಿಂದ ಅಂಚೆ ಅಧೀಕ್ಷಕರು ಸನ್ಮಾನಿಸಿದರು.
ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಮ್ ಕೆ ಕೃಷ್ಣಯ್ಯ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣ ರಾಜವಿಠಲ ಭಟ್ ಸ್ವಾಗತಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕರಾದ ಗುರುಪ್ರಸಾದ್ ಪ್ರಸ್ತಾವನೆಯ ಮಾತುಗಳನ್ನಾಡಿದರು.
ಅಂಚೆ ಇಲಾಖಾ ಸಿಬ್ಬಂದಿ ಸುರೇಂದ್ರ ಕೋಟ್ಯಾನ್ ಪ್ರಾರ್ಥಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ವಂದಿಸಿದರು.
ಉಪ ಅಂಚೆ ನಿರೀಕ್ಷಕ ಮಾಧವ ಟಿ ವಿ ಉಪಸ್ಥಿತರಿದ್ದರು. ಅಂಚೆ ಇಲಾಖಾ ಸಿಬ್ಬಂದಿ ಲೀಲಾವತಿ ತಂತ್ರಿ ನಿರೂಪಿಸಿದರು. ಮಹಿಳಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಡುಪಿ ಸೀರೆ ಉಟ್ಟು ಸಂಭ್ರಮಿಸಿದರು.