ಉಡುಪಿ: ನಿಟ್ಟೂರು ಪ್ರೌಢಶಾಲೆಗೆ ಉಡುಪಿ ರೋಟರಿ ವತಿಯಿಂದ ವಾಶ್ ಬೇಸಿನ್ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ವೈ. ಸುದರ್ಶನ್ ರಾವ್ ಸ್ವಚ್ಚತೆ ಮತು ಆರೋಗ್ಯ ವಿಷಯದ ಕುರಿತು ಮಾತನಾಡುತ್ತಾ ದೇಹ, ಮನಸ್ಸು ಮತ್ತು ನಾವು ಇರುವ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದೇ ನಿಜವಾದ ಆರೋಗ್ಯದ ಗುಟ್ಟು. ಕೈಯನ್ನು ಸ್ವಚ್ಚವಾಗಿಟ್ಟುಕೊಂಡರೆ ನಾವು ಅನೇಕ ಸೋಂಕುಗಳಿಂದ ರಕ್ಷಣೆ ಪಡೆಯಬಹುದು. ವಿದ್ಯಾರ್ಥಿಗಳು ಈ ವಾಶ್ ಬೇಸಿನ್ ಸದುಪಯೋಗಪಡಿಸಿಕೊಂಡು, ದೈಹಿಕ ಸ್ವಚ್ಚತೆಯ ಕುರಿತು ಕಾಳಜಿ ವಹಿಸಬೇಕು ಎಂದರು.
ಡಾ. ಕೆ. ಸುರೇಶ್ ಶೆಣೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿಟ್ಟೂರು ಪ್ರೌಢಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಶಾಲೆಯ ಪ್ರತಿ ಕೋಣೆಯಲ್ಲಿ ರೋಟರಿಯ ಕೊಡುಗೆಗಳು ಹಸಿರಾಗಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಸುಸಜ್ಜಿತವಾದ ವಾಶ್ ಬೇಸಿನ್ ಕೊಡುಗೆ ನೀಡಿದ ಉಡುಪಿ ರೋಟರಿಯ ಕಾರ್ಯ ಶ್ಲಾಘನೀಯ ಎಂದರು.
ಉಡುಪಿ ರೋಟರಿಯ ಅಧ್ಯಕ್ಷ ಹೇಮಂತ್ ಯು. ಕಾಂತ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಅನಸೂಯ ವಂದಿಸಿದರು. ಶಾಲಾ ಇಂಟರ‍್ಯಾಕ್ಟ್ ಸಂಯೋಜಕ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಉಪಾಧ್ಯಾಯ, ಜೆ.ಜಿ. ಪ್ರಭು, ಶಾಲಾ ಆಡಳಿತ ಉಪಾಧ್ಯಕ್ಷ ಎಸ್.ವಿ. ಭಟ್, ನಿವೃತ್ತ ಮುಖ್ಯೋಪಾಧ್ಯಾಯ ವೇಣುಗೋಪಾಲ ಆಚಾರ್ಯ ಮತ್ತು ರೋಟರಿ ಸದಸ್ಯರು ಉಪಸ್ಥಿತರಿದ್ದರು.