ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು 1957 ರಲ್ಲಿ ಮೊಗವೀರ ಕುಲಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲರವರ ನೇತೃತ್ವದಲ್ಲಿ ದಿವಂಗತ ಸದಿಯ ಸಾಹುಕಾರರು ದಾನವಾಗಿ ನೀಡಿದ ಜಾಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ.
ಹಲವಾರು ವರ್ಷಗಳಿಂದ ಶ್ರೀ ಮಹಾಲಕ್ಷ್ಮೀ ದೇವಸ್ಥಾನವನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಿ ಶ್ರೀ ಮಹಾಲಕ್ಷ್ಮೀ ದೇವಿಯನ್ನು ಹತ್ತಿರದಲ್ಲಿ ನೋಡಬೇಕೆನ್ನುವ ಹಂಬಲವನ್ನು ಸ್ಥಳೀಯ ಹಾಗೂ ಮುಂಬಯಿಯ ಭಕ್ತಾದಿಗಳು ಸಮಾಜದ ಮುಖಂಡರಾದ ನಾಡೋಜ ಡಾ. ಜಿ ಶಂಕರ್ ಹಾಗೂ ದ.ಕ ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳ ಜೊತೆ ವ್ಯಕ್ತಪಡಿಸಿದಾಗ, ತಾವೆಲ್ಲರೂ ಸೇರಿ ಶ್ರದ್ಧಾ ಭಕ್ತಿಯಿಂದ ಈ ಕೆಲಸ ಮಾಡೋಣ ಎಂದು ತಿಳಿಸಿ ಮಹಾಜನ ಸಂಘದ ನೇತೃತ್ವದಲ್ಲಿ ಕೇರಳದ ಜ್ಯೋತಿಷ್ಯ ವಿದ್ವಾನ್ ಮಾಧವನ್ ಪುದುವಾಳರವರ ಮೂಲಕ ಅಷ್ಟಮಂಗಲ ಪ್ರಶ್ನೆಯಲ್ಲಿ ವಿಚಾರ ವಿನಿಮಯ ಮಾಡಲಾಯಿತು. ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಸ್ಥಾನದ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿ ಬಂದಿದ್ದು ಅವುಗಳಿಗೆಲ್ಲಾ ಪ್ರಾಯಶ್ಚಿತ್ತಾದಿ ಸತ್ಕರ್ಮಗಳನ್ನು ನೆರವೇರಿಸಿ ನಾಡೋಜ ಡಾ. ಜಿ ಶಂಕರ್ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾರ್ಯಕ್ರಮ ಕೈಗೊಳ್ಳುವುದೆಂದು ನಿರ್ದಾರ ಕೈಗೊಳ್ಳಲಾಯಿತು.
ದ.ಕ ಮೊಗವೀರ ಮಹಾಜನ ಸಂಘದ ಸಭೆಯಲ್ಲಿ ಡಾ. ಜಿ ಶಂಕರ್‌ರವರ ಗೌರವಾಧ್ಯಕ್ಷತೆ, ಗುಂಡು ಬಿ ಅಮೀನ್‌ರವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು. ವಾಸ್ತು ತಜ್ಞ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಕ್ಷೇತ್ರ ತಂತ್ರಿಗಳಾದ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆಯವರ ಮಾರ್ಗದರ್ಶನದಲ್ಲಿ ಶಿಲಾಮಯ ಗರ್ಭ ಗುಡಿ, ಶಿಲಾಮಯ ಶ್ರೀ ಭದ್ರಕಾಳಿ ಗುಡಿ, ಶಿಲಾಮಯ ಶ್ರೀ ಪ್ರಸನ್ನ ಗಣಪತಿ ಗುಡಿ, ಶ್ರೀ ನಾಗದೇವರ ಗುಡಿ, ಸುತ್ತುಪೌಳಿ, ಗುರುಪೀಠ, ರಾಜಗೋಪುರ, ಯಾಗಶಾಲೆ, ವಸಂತ ಮಂಟಪ , ರಥಬೀಧಿ, ಸುತ್ತು ಆವರಣ ಗೋಡೆ, ಬಯಲು ರಂಗಮಂಟಪ , ಒಳಚರಂಡಿ ವ್ಯವಸ್ಥೆ, ನೆಲಹಾಸು(ಇಂಟರ್‌ಲಾಕ್) ಅಳವಡಿಕೆ ಹಾಗೂ ಪುಷ್ಕರಣಿಗಳನ್ನೊಳಗೊಂಡ ರೂಪಾಯಿ 32 ಕೋಟಿ ಅಂದಾಜು ಮೊತ್ತದ ಸಮಗ್ರ ಜೀರ್ಣೋದ್ಧಾರ ಕಾರ್ಯಕೈಗೊಳ್ಳಲಾಯಿತು.
ಮೊಗವೀರ ಭವನ: ಮಂಗಳೂರು ರಿಪೈನರೀಸ್ ಆಂಡ್ ಪೆಟ್ರೋಕೆಮಿಕಲ್ ಲಿಮಿಟೆಡ್ ಸಿ ಎಸ್ ಆರ್ ನಿಧಿಯಿಂದ ಕೊಡಮಾಡಿದ ಅನುದಾನದೊಂದಿಗೆ ಹಾಗೂ ಮಹಾಜನ ಸಂಘದ ಮೊತ್ತವನ್ನು ಸೇರಿಸಿ ಸುಮಾರು 15 ಕೋಟಿ ವೆಚ್ಚದ ಎರಡು ಸಭಾಂಗಣಗಳನ್ನೊಳಗೊಂಡ “ಮೊಗವೀರ ಭವನ” ನಿರ್ಮಿಸಲಾಗಿದೆ.
ಇದೀಗ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕಾರ್ಯಗಳು ಸಂಪನ್ನಗೊಂಡಿದ್ದು ಶಿಲೆದಾರು ಶಿಲ್ಪಗಳಿಂದ ಕೂಡಿದ ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ, ಶ್ರೀ ನಾಗದೇವರ ಸಹಿತ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವಗಳನ್ನೊಳಗೊಂಡ ವೈಧಿಕ ವಿಧಿ ವಿಧಾನಗಳನ್ನು ಇದೇ ಬರುವ ಎಪ್ರಿಲ್ 1 ರಿಂದ ಎಪ್ರಿಲ್ 15 ರವರೆಗೆ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ, ಹಿರಿಯ ಅರ್ಚಕರಾದ ವೆಂಕಟನರಸಿಂಹ ಉಪಾಧ್ಯಾಯ ಹಾಗೂ ರಾಘವೇಂದ್ರ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಮತ್ತು ಯತಿವರೇಣ್ಯರ ಶುಭಾಶೀರ್ವಾದಗಳೊಂದಿಗೆ ವೈಭವೋಪೇತವಾಗಿ ನಡೆಸಲು ಸಂಕಲ್ಪಿಸಲಾಗಿದೆ.
ಪ್ರಮುಖ ಧಾರ್ಮೀಕ ಕಾರ್ಯಕ್ರಮಗಳು
ಹೊರೆಕಾಣಿಕೆ: ರಾಜ್ಯ ಹಾಗೂ ಹೊರ ರಾಜ್ಯಗಳಿಂದ 2 ರಿಂದ 3 ಲಕ್ಷದಷ್ಟು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ದಿನಂಪ್ರತಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರಯುಕ್ತ ಮಾರ್ಚ್ 27 ಕ್ಕೆ ಅವಿಭಜಿತ ದ. ಕ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಂದ ಪ್ರಸಾದದ ರೂಪದಲ್ಲಿ ಹೊರೆಕಾಣಿಕೆಯು ಕ್ಷೇತ್ರವನ್ನು ತಲುಪಲಿದೆ. ಈಗಾಗಲೇ ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳಿಂದ ಹೊರೆಕಾಣಿಕೆಗಳು ದೇವಸ್ಥಾನಕ್ಕೆ ತಲುಪಿದೆ. ಕರಾವಳಿ ಭಾಗದ ಭಕ್ತಾಧಿಗಳ ಹೊರಕಾಣಿಕೆಯು 2000ಕ್ಕೂ ಮಿಕ್ಕಿದ ವಾಹನಗಳ ಮೂಲಕ ದೇವಸ್ಥಾನದ ಉತ್ತರ ಭಾಗದ ಮೆರವಣಿಗೆಯು ಮೂಳೂರಿನಿಂದ ಹಾಗೂ ದಕ್ಷಿಣ ಭಾಗದ ಮೆರವಣಿಗೆಯು ತೆಂಕ ಎರ್ಮಾಳ್‌ನಿಂದ ಹೊರಟು ವಿವಿಧ ರೀತಿಯ ಟ್ಯಾಬ್ಲೋ, ಚೆಂಡೆ, ಭಜನಾಕುಣಿತ ಮುಂತಾದ ಬಿರುದಾವಳಿಗಳೊಂದಿಗೆ ದೇವಸ್ಥಾನ ತಲುಪಲಿದೆ.
ಅನ್ನ ಛತ್ರ ಹಾಗೂ ಪಾರ್ಕಿಂಗ್: ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ನೂಕು ನುಗ್ಗಲಾಗದಂತೆ ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅನ್ನಛತ್ರದ ಚಪ್ಪರ ನಿರ್ಮಿಸಿ ಎಲೆ ಊಟ ಮತ್ತು ಬಫೆ ಊಟಕ್ಕೆ ಅನುಕೂಲವಾಗುವಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳ ವಾಹನ ನಿಲುಗಡೆಗೆ ಬೇಕಾಗುವಷ್ಟು ಪಾರ್ಕಿಂಗ್ ಜಾಗದ ಸಿದ್ದತೆ ಮಾಡಿಕೊಳ್ಳಲಾಗಿದೆ.
ರಾಜಗೋಪುರ ಹಾಗೂ ಲಕ್ಷ್ಮೀ ತೀರ್ಥ ಕೆರೆ ಉದ್ಘಾಟನೆ ಎಪ್ರಿಲ್ 1: ನೂತನವಾಗಿ ನಿರ್ಮಾಣಗೊಂಡ ಭವ್ಯ ರಾಜಗೋಪುರ ಹಾಗೂ ಸರಕಾರದ ಅನುದಾನದೊಂದಿಗೆ ನಿರ್ಮಾಣಗೊಂಡ ಲಕ್ಷ್ಮೀತೀರ್ಥ ಕೆರೆಯು ಎಪ್ರಿಲ್ 1ರ ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ದಿನಂಪ್ರತಿ ಕುಂಕುಮಾರ್ಚನೆಯೊಂದಿಗೆ ಮಹಾಮಂಗಳಾರತಿ: ಎಪ್ರಿಲ್ 2ರಿಂದ ಎಪ್ರಿಲ್ ೧೫ರತನಕ ಪ್ರತಿದಿನ ಸಂಜೆ ಗಂಟೆ 4 ರಿಂದ 5ರವರೆಗೆ ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆಯೊಂದಿಗೆ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಮಹಾಲಕ್ಷ್ಮೀ ದೇವಿಯ ಬಿಂಬ ಪ್ರತಿಷ್ಠೆ, ಸ್ವರ್ಣಕಲಶ ಪ್ರತಿಷ್ಠೆ ಹಾಗೂ ಮಹಾ ಅನ್ನಸಂತರ್ಪಣೆ ಎಪ್ರಿಲ್ ೬ರಂದು ನಡೆಯಲಿದೆ.
ವಾರ್ಷಿಕ ರಥೋತ್ಸವ: ವರ್ಷಂಪ್ರತಿ ನಡೆಯುವ ಶ್ರೀ ಮಹಾಲಕ್ಷ್ಮೀ ರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆಯು ಎಪ್ರಿಲ್ 13ರಂದು ನಡೆಯಲಿದೆ.
ಚತುಃಪವಿತ್ರ ನಾಗಮಂಡಲ ಸೇವೆ: ಎಪ್ರಿಲ್ 15ರ ರಾತ್ರಿ ಗಂಟೆ 8.00ಕ್ಕೆ ಹಾಲಿಟ್ಟು ಸೇವೆ ರಾತ್ರಿ 9.00ರಿಂದ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಎಪ್ರಿಲ್ 16ರ ಬೆಳಗ್ಗೆ ಸಂಪೋಕ್ಷಣೆ, ಮಂತ್ರಾಕ್ಷತೆಯೊಂದಿಗೆ ಪುನಃ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳು ಶುಭಾಂತ್ಯವಾಗಲಿದೆ.
ನಿರಂತರ 15 ದಿನಗಳ ಪರ್ಯಂತ ಧಾರ್ಮಿಕ ಸಭಾಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಸಿದ್ಧರಾಮಯ್ಯ, ಹೆ ಚ್ ಡಿ ಕುಮಾರಸ್ವಾಮಿ, ಸಂಸದರುಗಳಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ರಾಜ್ಯದ ಹಾಲಿ ಹಾಗೂ ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ. ವಿವಿಧ ಮಠಾಧೀಶರುಗಳು ಮತ್ತು ಧಾರ್ಮಿಕ ಮುಖಂಡರುಗಳು ಆಶೀರ್ವಚನ ನೀಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರ ಪ್ರಸ್ತುತ ಪಡಿಸುವ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಾಂಜವೂರು ಇವರು ಸಾದರ ಪಡಿಸುವ 20 ರಾಜ್ಯಗಳ ಕಲಾವಿದರುಗಳ ಸಾಂಸ್ಕೃತಿಕ ಉತ್ಸವ ಏರ್ಪಡಿಸಲಾಗಿದೆ. ರಾಜ್ಯದ ಹಾಗೂ ಸ್ಥಳೀಯ ಕಲಾವಿದರುಗಳಿಂದ ಪ್ರತಿ ದಿನ ಸಂಜೆ ನೃತ್ಯ ವೈವಿಧ್ಯ, ಯಕ್ಷಗಾನ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಮತ್ತು ಖ್ಯಾತ ಗಾಯಕರೂ, ಸಂಗೀತ ನಿರ್ದೇಶಕರೂ ಆದ ಗಾನಗಂಧರ್ವ ವಿಜಯ ಪ್ರಕಾಶರವರಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಪೂರ್ವಾಹ್ನ ಗಂಟೆ 11.30 ರಿಂದ ರಾಜ್ಯದ ಖ್ಯಾತ ಕಲಾವಿದರುಗಳಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನಾಡೋಜ ಡಾ. ಜಿ ಶಂಕರ್, ದ.ಕ ಮೊಗವೀರ ಮಹಾಜನಸಂಘ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್, ದ.ಕ ಮೊಗವೀರ ಮಹಾಜನ ಸಂಘ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ದ.ಕ ಮೊಗವೀರ ಮಹಾಜನ ಸಂಘ ಉಪಾಧ್ಯಕ್ಷರಾದ ಸುಭಾಶ್ಚಂದ್ರ ಕಾಂಚನ್, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ವಿನಯ್ ಕರ್ಕೇರ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶಂಕರ್ ಸಾಲ್ಯಾನ್, ದ.ಕ ಮೊಗವೀರ ಮಹಾಜನ ಸಂಘ ಕೋಶಾಧಿಕಾರಿ ಭರತ್ ಎರ್ಮಾಳ್, ದ.ಕ ಮೊಗವೀರ ಮಹಾಜನಸಂಘ ಜೊತೆ ಕಾರ್ಯದರ್ಶಿ ಮೋಹನ್ ಕರ್ಕೇರ, ತೋನ್ಸೆ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ಪ್ರಧಾನ ಅರ್ಚಕರು ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ರಾಘವೇಂದ್ರ ಉಪಧ್ಯಾಯ, ಗಂಗಾಧರ ಸುವರ್ಣ ಎರ್ಮಾಳ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.