ಉಡುಪಿ: ನಮ್ಮ ಸಹೋದ್ಯೋಗಿ ಬಂಧುಗಳೇ ನಮ್ಮ ಶಕ್ತಿ, ನಮ್ಮ ಗ್ರಾಹಕ ಬಾಂಧವರೇ ನಮ್ಮ ಆಸ್ತಿ. ಮೇಲಧಿಕಾರಿಗಳು ತಮ್ಮ ಸಹೋದ್ಯೋಗಿಗಳಿಗೆ ಇಲಾಖೆ ನೀಡಿದ ಗುರಿ ತಲುಪಲು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಒತ್ತಡ ಹೇರುವುದಕ್ಕಿಂತ ವಿಶೇಷ ರೀತಿಯಲ್ಲಿ ಅವರಿಗೆ ಪ್ರೇರಣೆ ನೀಡುವುದರ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಕೌಶಲ್ಯಭರಿತ ಸಾಫ್ಟ್ ಸ್ಕಿಲ್ ತರಬೇತಿಗಳು ಇಂದಿನ ದಿನದ ಅಗತ್ಯವಾಗಿದೆ ಎಂದು ಉಡುಪಿ ಅಂಚೆ ವಿಭಾಗದ ಅಧೀಕ್ಷಕರಾದ ನವೀನ್ ಚಂದರ್ ರವರು ಅಭಿಪ್ರಾಯಪಟ್ಟರು.
ಭಾರತೀಯ ಅಂಚೆ ಇಲಾಖೆ, ಉಡುಪಿ ಅಂಚೆ ವಿಭಾಗ ಹಾಗು ಜೆಸಿಐ ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಉಡುಪಿ ಅಂಚೆ ವಿಭಾಗದ ಸಹೋದ್ಯೋಗಿಗಳಿಗೆ ನಡೆದ ಸಾಫ್ಟ್ ಸ್ಕಿಲ್ ತರಬೇತಿ ಶಿಬಿರವನ್ನು ಸುಗಂಧಿ ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿ, ಜೆಸಿ ರಾಷ್ಟ್ರೀಯ ತರಬೇತುದಾರ ಸದಾನಂದ ನಾವಡರವರು ಮಾತನಾಡುತ್ತಾ, ಭಾರತದಾದ್ಯಂತ ಸುಮಾರು 1,55,000 ಕ್ಕೂ ಅಧಿಕ ಅಂಚೆ ಕಚೇರಿಗಳನ್ನು ಹೊಂದಿರುವ ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತೀ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದ್ದು, ಇಲಾಖೆಯ ಎಲ್ಲ ವಿಶೇಷ ಯೋಜನೆಗಳು, ಸೇವೆಗಳು, ಮಾಹಿತಿಗಳು ಸಾರ್ವಜನಿಕರಿಗೆ ಸುಲಭ ಲಭ್ಯವಾಗಬೇಕು. ಹಾಗಾದಾಗ ಮಾತ್ರ ಇಲಾಖೆಯ ನಿರೀಕ್ಷಿತ ಗುರು ತಲುಪಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶಿಬಿರಕ್ಕೆ ಸಹಭಾಗಿತ್ವ ನೀಡಿದ ಜೇಸಿ ಕಟಪಾಡಿ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡುತ್ತಾ, ಭಾರತದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದ ಇಲಾಖೆ ಎಂಬ ಹೆಗ್ಗಳಿಕೆ ಇರುವ ಭಾರತೀಯ ಅಂಚೆ ಇಲಾಖೆಯೊಂದಿಗೆ ಆಧಾರ್ ನೋಂದಣಿ, ತರಬೇತಿ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಬಗ್ಗೆ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ಉಡುಪಿ ಅಂಚೆ ವಿಭಾಗದ ಸುಮಾರು ಅರವತ್ತಕ್ಕೂ ಅಧಿಕ ನೌಕರರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಉಡುಪಿ ಅಂಚೆ ವಿಭಾಗದ ಸಹಾಯಕ ಅಧೀಕ್ಷಕರಾದ ಜಯರಾಮ ಶೆಟ್ಟಿ ಪ್ರಸ್ತಾವನೆಯ ಮಾತುಗಳನ್ನಾಡಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಗುರುಪ್ರಸಾದ್, ಜೇಸಿ ಕಾರ್ಯದರ್ಶಿ ಗೌರವ್ ಜತ್ತನ್, ಮಹೇಶ್ ಅಂಚನ್ ಉಪಸ್ಥಿತರಿದ್ದರು.
ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ, ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್ ವಂದಿಸಿದರು. ಅಖಿಲಾ ಹೆಗ್ಡೆ ಪ್ರಾರ್ಥಿಸಿದರು. ಶಿಬಿರದ ಸಂಚಾಲಕರಾದ ಪ್ರವೀಣ್ ಜತ್ತನ್ ಕಾರ್ಯಕ್ರಮ ನಿರೂಪಿಸಿದರು. ಅಂಚೆ ಇಲಾಖಾ ಸಿಬ್ಬಂದಿಗಳಾದ ಪ್ರಶಾಂತ್ ಹಾಗೂ ನಿತೇಶ್ ಕೆ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜೇಸೀ ರಾಷ್ಟ್ರೀಯ ತರಬೇತುದಾರರಾದ ಸದಾನಂದ ನಾವಡ ಹಾಗೂ ಡಾ. ಜಗದೀಶ್ ಜೋಗಿಯವರು ಸಾಫ್ಟ್ ಸ್ಕಿಲ್ ತರಬೇತಿ ನಡೆಸಿಕೊಟ್ಟರು.