ಮಂಗಳೂರು: ಹವ್ಯಾಸಿ ಬರಹಗಾರ ಧೀರಜ್ ಕುಮಾರ್ ಉಳ್ಳಾಲ್ ಇವರ ಮೊದಲ ಸಾಹಿತ್ಯ, ಪರಿಕಲ್ಪನೆ ಹಾಗೂ ನಿರ್ಮಾಣದಲ್ಲಿ ತುಳು ಭಾಷೆಯಲ್ಲಿ ಆಲ್ಬಮ್ ಹಾಡು ತಯಾರಾಗಿದ್ದು, ಮಾರ್ಚ್ 20 ರಂದು ಬೆಳಗ್ಗೆ 11.11 ಗಂಟೆಗೆ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ದುರ್ಗಾಂಬಿಕ ಸಿನಿ ಕ್ರಿಯೇಷನ್ಸ್ ಹಾಗೂ ಭವಾನಿ ಕ್ರಿಯೇಷನ್ಸ್ ಈ ಸಾಂಗ್ ಅನ್ನು ಅರ್ಪಿಸಲಿದೆ. “ಗರ್ವ” ಟೆಲಿಚಿತ್ರ,”ಮಲೆನಾಡು” ಆಲ್ಬಮ್ ಸಾಂಗ್ ಖ್ಯಾತಿಯ, ಕನ್ನಡ ಹಾಗೂ ತುಳು ಚಿತ್ರಗಳಲ್ಲಿ ಸಹ, ಸಹಾಯಕ ನಿರ್ದೇಶಕರಾಗಿ ಯಶಸ್ವಿಯಾಗಿರುವ ತುಳುನಾಡಿನ ಯುವ ನಿರ್ದೇಶಕ ಹರ್ಷಿತ್ ಸೋಮೇಶ್ವರ ಇವರು ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ.
ತುಳುನಾಡಿನ ಅಧ್ಬುತ ಗಾಯಕರಾದ ಸಂತೋಷ್ ಬೇಂಕ್ಯ ಅವರು ಈ ಗೀತೆಯನ್ನು ಮನಕಲುಕುವಂತೆ ಹಾಡಿದ್ದಾರೆ. ಪ್ರತಿಭಾನ್ವಿತ ತುಳು ನಾಟಕ, “ಬಲೆ ಬುಲಿಪಾಲೆ ಉಂದು ನಾಟಕ” ಖ್ಯಾತಿಯ ಕಲಾವಿದ ನಿಖಿಲ್ ಶೆಟ್ಟಿ ನಾಯಕನಾಗಿ, ಹೊಸ ಪ್ರತಿಭೆ ಸನ್ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಮುಖ್ಯ ಪಾತ್ರದಲ್ಲಿ ಖ್ಯಾತ ನಾಟಕ ಕಲಾವಿದೆ ನಮಿತಾರವರು ಅಮೋಘವಾಗಿ ನಟಿಸಿದ್ದಾರೆ. ತುಳು, ಕನ್ನಡ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ ’ರಾಷ್ಟ್ರೀಯ ಬಾಲ ನಟ ಪ್ರಶಸ್ತಿ’ ವಿಜೇತ ಧನವಿತ್ ಸುವರ್ಣ ಕಟೀಲು ಇವರು ಕೂಡ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.
’ಸೂತಕ’ ಶೀರ್ಷಿಕೆ ಯಾಕೆ ಇದೆ ಅನ್ನುವ ಕುತೂಹಲಕ್ಕೆ ಮಾರ್ಚ್ 20ರಂದು ಉತ್ತರ ಸಿಗಲಿದೆ. ಯುವ ಪೀಳಿಗೆಗೆ ಭಾವನಾತ್ಮಕ ಮನಕಲುಕುವ ಸಂದೇಶವನ್ನು ನೀಡುವ ಉದ್ದೇಶದಿಂದ ಈ ಗೀತೆಯನ್ನು ತಯಾರಿಸಲಾಗಿದೆ ಎಂದು ಸೂತಕ ತಂಡ ಹೇಳಿದೆ.