ಬ್ರಹ್ಮಾವರ: ರೋಟರಿ ಕ್ಲಬ್ ಸಾಯ್ಬ್ರಕಟ್ಟೆ ನೇತೃತ್ವದಲ್ಲಿ ಇಂಟರಾಕ್ಟ್ ಕ್ಲಬ್ ಮಹಾತ್ಮಾ ಗಾಂಧಿ ಪ್ರೌಢ ಶಾಲೆ ಸಾಯ್ಬ್ರಕಟ್ಟೆ ಹಾಗೂ ಸರಕಾರಿ ಪ್ರೌಢಶಾಲೆ ಜಾನುವಾರುಕಟ್ಟೆ ಇದರ ಸಹಯೋಗದೊಂದಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ನಡೆಯಿತು.
ಕಾರ್ಯಾಗಾರವನ್ನು ರೋಟರಿ ಸಹಾಯಕ ಗವರ್ನರ್ ಪಿ. ಪದ್ಮನಾಭ ಕಾಂಚನ್ ಉದ್ಘಾಟಿಸಿ, ಗುಣಮಟ್ಟದ ಶಿಕ್ಷಣಕ್ಕಾಗಿ ರೋಟರಿಯ ಸಹಭಾಗಿತ್ವದಲ್ಲಿ ಟೀಚರ್ ಎಜುಕೇಶನ್, ಇ ಪ್ರೋಗ್ರಾಮ್ಮಿಂಗ್, ಎಡಲ್ಟ್ ಎಜುಕೇಶನ್ ನಂತಹ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದ್ದೇವೆ. ಇದರ ಮೂಲಕ ಸೃಜನಶೀಲತೆಯ ಅನಾವರಣ ಹಾಗೂ ಕಲಿಕೆಯ ಉತ್ತೇಜನಕ್ಕೆ ರೋಟರಿಯು ಪ್ರೇರಣೆ ನೀಡುತ್ತಿದೆ.
ವಿದ್ಯಾರ್ಥಿಗಳು ಪ್ರೇರಣೆ ಪಡೆದು ಚಿಂತನಶೀಲರಾಗಿ ಸೃಜನಶೀಲ ವ್ಯಕ್ತಿಗಳಾಗಬೇಕು ಎಂದರು. ಕಾರ್ಯಾಗಾರದಲ್ಲಿ “ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದು ಹೇಗೆ ಹಾಗೂ ಎಸ್ಸೆಸ್ಸೆಲ್ಸಿ ನಂತರ ಮುಂದೇನು? ವಿಷಯದ ಕುರಿತು ರೋಟರಿಯ ಮಾಜಿ ಸಹಾಯಕ ಗವರ್ನರ್ ಅಶೋಕ್ ಕುಮಾರ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸಾಯ್ಬ್ರಕಟ್ಟೆ ಅಧ್ಯಕ್ಷ ಯು. ಪ್ರಸಾದ್ ಆರ್. ಭಟ್ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಲಯ ಪ್ರತಿನಿಧಿಗಳಾದ ವಿಜಯಕುಮಾರ ಶೆಟ್ಟಿ, ರೋಟರಿ ಸಾಯ್ಬ್ರಕಟ್ಟೆ ಕಾರ್ಯದರ್ಶಿ ಅಣ್ಣಯ್ಯದಾಸ್, ಇಂಟರಾಕ್ಟ್ ಅಧ್ಯಕ್ಷದ್ವಯರಾದ ಪ್ರಜ್ವಲ್ ಹಾಗೂ ಮಾನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ನ ನೀಲಕಂಠ ರಾವ್, ರಾಮಪ್ರಕಾಶ್, ಶ್ರೀಕೃಷ್ಣ ಶಾನುಭಾಗ್, ಜಾನುವಾರುಕಟ್ಟೆ ಪ್ರೌಢಶಾಲೆಯ ಶಿಕ್ಷಕ ಪ್ರತಿನಿಧಿ ರಮ್ಯಾ ಹಾಗೂ ಇತರ ಶಿಕ್ಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸ್ವಾಗತಿಸಿ, ಸಹ ಶಿಕ್ಷಕಿ ಡೈಸಿ ಡಿಸಿಲ್ವ ವಂದಿಸಿದರು. ಶಿಕ್ಷಕ ಶಿರಿಯಾರ ಗಣೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.