ಗುಜ್ಜಾಡಿ: ಭಜನೆ ಎನ್ನುವುದು ಧಾರ್ಮಿಕ ಮನ ಶುದ್ಧಿಯನ್ನು ತರುವುದು ಮಾತ್ರವಲ್ಲದೆ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿಸಲು ಸಹಾಯ ಮಾಡುತ್ತದೆ. ಆ ಮೂಲಕ ಜನರಲ್ಲಿ ಪರಸ್ಪರ ಸಹಕಾರವನ್ನು ಮೂಡಿಸಿ ಸಮಾಜದಲ್ಲಿ ಶಾಂತಿ ನೆಲೆಸಲು ಅನುಕೂಲವಾಗುತ್ತದೆ ಎಂದು ಕೊಂಕಣ ಕೊಪ್ಪದ ಸನ್ಯಾಸಿನಿ ಪ್ರವಚನ ಕೇಸರಿ ಪದ್ಮಾದೇವಿ ಅವರು ಅಭಿಪ್ರಾಯಪಟ್ಟರು.
ಅವರು ನಾಯಕವಾಡಿ ಗುಜ್ಜಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನ ಮತ್ತು ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿಯ 67ನೇ ವಾರ್ಷಿಕೋತ್ಸವ ಮತ್ತು ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ 48ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.
ಶ್ರೀ ಸಂಗಮೇಶ್ವರ ದೇವಸ್ಥಾನದ ಅಧ್ಯಕ್ಷರಾದ ರಾಜು ಎಂ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಎಸ್ ಪೂಜಾರಿ, ಕುಂದಾಪುರ ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿಗಳಾದ ಕುಸುಮಾಕರ ಶೆಟ್ಟಿ, ಶ್ರೀ ಸಂಗಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರಕಾಂತ ಕೆ., ಶ್ರೀ ಚೆನ್ನ ಬಸವೇಶ್ವರ ಯುವಕ ಮಂಡಲದ ಅಧ್ಯಕ್ಷ ಕೃಷ್ಣ ಕೆ., ಸಂಗಮೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ರಘುರಾಮ ಟಿ., ಯುವಕ ಮಂಡಲದ ಗೌರವಾಧ್ಯಕ್ಷ ದಿನೇಶ್ ಟಿ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ ತಲ್ಲೂರು ಇವರನ್ನು ಸನ್ಮಾನಿಸಲಾಯಿತು.
ಕುಂದಾಪುರ ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಮಾಜಿ ಅಧ್ಯಕ್ಷರಾದ ನಾರಾಯಣ ಕೆ ಗುಜ್ಜಾಡಿ ಪ್ರಸ್ತಾವಿಕ ನುಡಿಗಳನ್ನಾಡಿದರು. ನಾಗರಾಜ ಎನ್ ಡಿ ಸ್ವಾಗತಿಸಿ, ಗಣೇಶ್ ಕುಮಾರ್ ವಂದಿಸಿದರು.
ನಿತೇಶ್ ಎನ್ ಡಿ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು.