ಉಡುಪಿ: ಭಾರತ ಸರ್ಕಾರ ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಪೂರ್ಣಪ್ರಜ್ಞ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಉಡುಪಿ ಜಿಲ್ಲೆಯ ಯುವಕ, ಯುವತಿ ಮತ್ತು ಮಹಿಳಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ ಮಾರ್ಚ್ 7 ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಪೂರ್ಣಪ್ರಜ್ಞ ಕಾಲೇಜು ಆಡಿಟೋರಿಯಂ ನಲ್ಲಿ ನಡೆಯಲಿದೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಉದ್ಘಾಟನೆ ನೆರವೇರಿಸಲಿದ್ದಾರೆ. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ. ಸಿ.ಇ.ಓ ಡಾ. ನವೀನ್ ಭಟ್ ವೈ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪಿಪಿಸಿ ಮ್ಯಾನೇಜ್ಮೆಂಟ್ ಕಮಿಟಿ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಪೂರ್ಣಪ್ರಜ್ಞ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕ ಡಾ. ಭರತ್ ವಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣಾಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿರುವ ಶಾಂತಿನಿಕೇತನ ಯುವ ವೃಂದಕ್ಕೆ ರಾಜ್ಯ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಹಾಗೂ ಕ್ಲೀನ್ ಇಂಡಿಯಾ ಪ್ರಶಸ್ತಿಗಳನ್ನು ಜಿಲ್ಲಾಧಿಕಾರಿಯವರು ಪ್ರದಾನ ಮಾಡಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಪಡುಕರೆ ಕಾಲೇಜು ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಸ್ಪರ್ಧಾತ್ಮಕ ಪರೀಕ್ಷೆ, ಯೂತ್ ಲೀಡರ್ಶಿಪ್, ವ್ಯಕ್ತಿತ್ವ ವಿಕಸನದ ಬಗ್ಗೆ, ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾದಕ ವ್ಯಸನ ಮುಕ್ತ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಸಬಲೀಕರಣದ ಬಗ್ಗೆ, ಮಾಹೆ ಮಣಿಪಾಲದ ಸ್ಟೂಡೆಂಟ್ ಕೌನ್ಸಿಲರ್ ಡಾ. ರಾಯನ್ ಮಥಾಯಸ್ ಪ್ರೊಫೆಶನಲ್ ಕಾಂಪೆಟೆನ್ಸಿಸ್ ಆ್ಯಂಡ್ ಎಮೋಶನಲ್ ಇಂಟೆಲಿಜೆನ್ಸ್ ಮತ್ತು ಟಿವಿ ನಿರೂಪಕ ಆಲ್ವಿನ್ ದಾಂತಿ ಒತ್ತಡ ನಿರ್ವಹಣೆ, ಸಮಯ ಪರಿಪಾಲನೆ, ಗುಡ್ ಗವರ್ನೆನ್ಸ್ ಸಿವಿಕ್ ಎಜುಕೇಶನ್ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆಯ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.