ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ ಪ್ಯಾಕೇಜ್ ಮೂಲಕ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆ ಅಭಿವೃದ್ಧಿಗೆ ಮೀಸಲಿಟ್ಟ 20,000 ಕೋಟಿ ಅನುದಾನದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಯೋಜನೆಯನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಮೀನುಗಾರಿಕೆ ಇಲಾಖೆಯ ವತಿಯಿಂದ ದೇಶದ ಕರಾವಳಿ ರಾಜ್ಯಗಳ ಬಂದರುಗಳಿಗೆ ಭೇಟಿ ನೀಡಿ, ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗುಜರಾತ್ ಕಛ್ ಜಿಲ್ಲೆಯ ಮಾಂಡವಿ ಬಂದರಿನಲ್ಲಿ ಆಯೋಜಿಸಿದ್ದ ಸಾಗರ ಪರಿಕ್ರಮ ಜಲ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಸಚಿವರಾದ ಪರ್ಶೋತ್ತಮ್ ರೂಪಾಲ ರವರನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಭೇಟಿಯಾಗಿ ಮನವಿ ಸಲ್ಲಿಸಿದರು.
ಸಾಗರ್ ಪರಿಕ್ರಮ ಜಲಯಾತ್ರೆಯಲ್ಲಿ ಮೀನುಗಾರಿಕೆ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಬೋಟ್ ಮೂಲಕ ತೆರಳಿ ವಿವಿಧ ರಾಜ್ಯಗಳ ಬಂದರುಗಳಿಗೆ ಭೇಟಿ ನೀಡಿ ಮೀನುಗಾರರೊಂದಿಗೆ ಸಮಾಲೋಚನೆ ನಡೆಸುವ ವಿನೂತನ ಕಾರ್ಯಕ್ರಮವನ್ನು ಇಲಾಖೆ ಈ ಮೂಲಕ ರೂಪಿಸಿದೆ.
ಮೀನುಗಾರಿಕೆ ದೋಣಿಗಳ ಡೀಸೆಲ್ ಮೇಲಿನ ರೋಡ್ ಸೆಸ್ ವಿನಾಯಿತಿ, ನಾಡದೋಣಿ ಮೀನುಗಾರಿಕೆ ಸೀಮೆಎಣ್ಣೆ ಸಮರ್ಪಕ ಪೂರೈಕೆ ಹಾಗೂ ಸೀಮೆ ಎಣ್ಣೆ ಇಂಜಿನ್ ಬಳಕೆಗೆ ಪರ್ಯಾಯವಾಗಿ ಎಲೆಕ್ಟ್ರಿಕಲ್ ಇಂಜಿನ್ ತಂತ್ರಜ್ಞಾನದ ಬಳಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಬ್ಸಿಡಿ, ಬಂದರುಗಳ ಹೂಳೆತ್ತಲು ರಾಜ್ಯ ಸರಕಾರಗಳಿಗೆ ಡ್ರೆಜ್ಜರ್ ಯಂತ್ರ ಖರೀದಿಗೆ ಕೇಂದ್ರ ಸರಕಾರದ ಅನುದಾನ, ಮೀನುಗಾರಿಕೆ ದೋಣಿಗಳ ವಿಮೆಯ ನಿಯಮಾವಳಿಗಳ ಸರಳೀಕರಣಗೊಳಿಸಿ ಅವಘಡಕ್ಕೀಡಾದ ದೋಣಿಗಳ ವಿಮಾ ಪರಿಹಾರ ಮೊತ್ತ ಶೀಘ್ರ ಪಾವತಿಗೆ ಕ್ರಮ, ಗರಿಷ್ಠ ಸಂಖ್ಯೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ, ಕೃಷಿ ಇಲಾಖೆಯ ಸಾಲ ಯೋಜನೆ ಹಾಗೂ ಬೆಂಬಲ ಬೆಲೆ ಮಾದರಿಯಲ್ಲಿ ಮೀನುಗಾರಿಕೆಗೂ ಶೂನ್ಯ ಬಡ್ಡಿದರದ ಸಾಲ ಹಾಗೂ ಪೂರಕ ಯೋಜನೆ, ತುರ್ತು ಸಂದರ್ಭಗಳಲ್ಲಿನ ಅವಶ್ಯಕತೆಗೆ ಸೀ ಆಂಬ್ಯುಲೆನ್ಸ್ ವ್ಯವಸ್ಥೆ, ಕುಳಾಯಿ ಮತ್ತು ಹೆಜಮಾಡಿ ಮೀನುಗಾರಿಕೆ ಬಂದರು ಕಾಮಗಾರಿಗೆ ವೇಗ ಹಾಗೂ ಕಾಪುವಿನಲ್ಲಿ ನಾಡ ದೋಣಿಗಳ ಜೆಟ್ಟಿ ನಿರ್ಮಾಣ ಸಹಿತ ಹಲವು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಆದ್ಯತೆಯ ಮೇರೆಗೆ ಯೋಜನೆ ರೂಪಿಸುವ ಭರವಸೆ ನೀಡಿರುವುದಾಗಿ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.