ಜಯಪುರ: ಮೇಗುಂದಾ ಹೋಬಳಿ ಮೇಗೂರು ಸಮೀಪದ ಪಂಚಮಿ ಕಲ್ಲು ಎಂಬ ಸ್ಥಳದಲ್ಲಿ 16-17 ನೇ ಶತಮಾನಕ್ಕೆ ಸೇರಿದ ಶಿಲಾಶಾಸನವನ್ನು ಶ್ರೀಪಾಲ ಜೈನ್ ಅವರ ಮಾಹಿತಿಯ ಮೇರೆಗೆ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅವರು ಅಧ್ಯಯನ ಕೈಗೊಂಡಿರುತ್ತಾರೆ. ಪಂಚಮಿಕಲ್ಲಿನಲ್ಲಿರುವ ಪುಷ್ಕರಣಿಯಲ್ಲಿನ ಶಿಲೆಯ ಮೇಲೆ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ “ಶ್ರೀ ಬೊಮಣ ಸೆಟಿ ಮಗ ಕಟಿಗೆ…” ಎಂಬ ಒಂದು ಸಾಲಿನ ಶಾಸನವಿದೆ.
ಶಾಸನದ ಇನ್ನೂ ಕೆಲವು ಅಕ್ಷರಗಳು ತ್ರುಟಿತಗೊಂಡಿದ್ದು, ಈ ಪುಷ್ಕರಣಿಯನ್ನು ಬೊಮಣ ಸೆಟ್ಟಿಯ ಮಗ ನಿರ್ಮಾಣ ಮಾಡಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸನವಿರುವ ಪಕ್ಕದ ಬಂಡೆ ಕಲ್ಲಿನ ಕೆಳಭಾಗದಲ್ಲಿ “ಬೊಸೆಟಿ” ಎಂಬ ಬರಹವಿರುವ ಇನ್ನೊಂದು ಚಿಕಣಿ ಶಾಸನವಿದೆ.
ಜೈನರ ಪವಿತ್ರ ಕ್ಷೇತ್ರ ಪಂಚಮಿ ಕಲ್ಲಿನ ತುತ್ತ ತುದಿಯ ಬಂಡೆಯ ಮೇಲೆ ಸಲ್ಲೇಖನ ವಿಧಿಯಿಂದ ಮರಣಹೊಂದಿದ ಜೈನ ಮುನಿಗಳ ಸಮಾಧಿ ಇದ್ದು ಇಬ್ಬರು ಮುನಿಗಳ ಹೆಸರನ್ನು ಶಿಲೆಯಲ್ಲಿ ಕೊರೆಯಲಾಗಿದ್ದು ಅದರಲ್ಲಿ ಒಬ್ಬ ಮುನಿಗಳು ದೇವಚಂದ್ರ ಭಟ್ಟಾರಕರು, ಮತ್ತೊಬ್ಬ ಮುನಿಗಳ ಹೆಸರಿನ ಅಕ್ಷರ ನಾಶವಾಗಿದೆ.
ಇಲ್ಲಿರುವ ಬಂಡೆಕಲ್ಲಿನ ಮೇಲೆ ಶಾಸನವಿದ್ದು, ಬಹಳಷ್ಟು ತೃಟಿತಗೊಂಡಿರುವುದರಿಂದ ಓದಲು ಅಸಾಧ್ಯವಾಗಿದೆ. ಅದೇ ರೀತಿ ಪಗಡೆ ಆಟದ ರೇಖಾ ಚಿತ್ರ, ಕೆಲಸದ ಆಳುಗಳ ಲೆಕ್ಕವನ್ನು ಗೆರೆಯ ಮೂಲಕ ಮಾಡಿರುವುದನ್ನು ಗುರುತಿಸಲಾಗಿದೆ. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಶ್ರೀ ಸುಧಾಕರ ಜೈನ್ ಕೊಗ್ರೆ ಅವರು ಸಹಕರಿಸಿರುತ್ತಾರೆ.