ಉಡುಪಿ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಬ್ಬು ಬೆಳೆಯುವ ರೈತರ ಏಕೈಕ ಆಶಾಕಿರಣವಾಗಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯು ಕಳೆದ ಹಲವಾರು ವರ್ಷದಿಂದ ಮುಚ್ಚಿದ್ದು, ಇದರಿಂದ ರೈತರಿಗೆ ಬಹಳ
ತೊಂದರೆಯಾಗಿದೆ. ಆದ್ದರಿಂದ ಈ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಸುಮಾರು ೧೦೦ ಕೋಟಿ ಅನುದಾನ ಬೇಕಾಗಿರುವುದರಿಂದ ಮುಖ್ಯಮಂತ್ರಿಗಳು ಮುಂದಿನ ಬಜೆಟ್ನಲ್ಲಿ ಈ ಅನುದಾನವನ್ನು ಒದಗಿಸಿಕೊಡಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಅವರ ಅಧಿಕಾರವಧಿಯಲ್ಲಿ ಒದಗಿಸಿದ ೧೨ ಕೋಟಿ ಅನುದಾನದಲ್ಲಿ ರೈತರ ಬಾಕಿ ಉಳಿದ ಮೊತ್ತ ಹಾಗೂ ನೌಕರ ವೇತನಗಳನ್ನು ನೀಡಲಾಗಿತ್ತು. ಅನಂತರ ಯಾವುದೇ ಸರಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರಸ್ತುತ ವಾರಾಹಿ ನೀರನ್ನು ಕೂಡ ತಡೆಹಿಡಿಯಲಾಗಿದೆ.
ಇದರಿಂದ ಈ ಭಾಗದಲ್ಲಿ ಅನೇಕ ಕೃಷಿ ಭೂಮಿ ಹಡಿಲು ಬೀಳುವಂತಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಅನುದಾನ ಒದಗಿಸಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಅಡ್ವಕೇಟ್ ಎಲ್ಲೂರು ಶಶಿಧರ ಶೆಟ್ಟಿ, ಉಪಾಧ್ಯಕ್ಷರಾದ ಶೇಖರ ಕೋಟ್ಯಾನ್ ಬ್ರಹ್ಮಾವರ, ಕಾರ್ಯಧ್ಯಕ್ಷರಾದ ಪ್ರಕಾಶ್ ಪೂಜಾರಿ ಕೆರ್ವಾಶೆ, ಜಿಲ್ಲಾ ಕಿಸಾನ್ ಸಂಚಾಲಕರಾದ ಭಾಸ್ಕರ ಶೆಟ್ಟಿ ಕುಂದಾಪುರ, ರಾಜ್ಯ ಕಿಸಾನ್ ಕಾರ್ಯದರ್ಶಿಗಳಾದ ಉದಯ ಶೆಟ್ಟಿ ಕಾರ್ಕಳ, ನಾಗಪ್ಪ ಕೊಟ್ಟಾರಿ ವಂಡ್ಸೆ, ರಾಯ್ಸ್ ಮರ್ವಿನ್ ಫೆರ್ನಾಂಡಿಸ್ ಉದ್ಯಾವರ ಹಾಗೂ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಎರಡು ಜಿಲ್ಲೆಯ ರೈತರ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.