ಕಾರ್ಕಳ: ಪ್ರಪಂಚದಲ್ಲಿ ಅದೆಷ್ಟೋ ಮಿಲಿಯನ್ ಜನ ಅನ್ನ ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ನಮ್ಮ ತಟ್ಟೆಗೆ ಬಿದ್ದ ಅನ್ನ ಎಂದೂ ಕೂಡಾ ವ್ಯರ್ಥವಾಗದಿರಲಿ. ಜೊತೆಗೆ ಕುಡಿಯುವ ನೀರಿಗೂ ಹಾಹಾಕಾರವಿರುವಾಗ ಈ ಬಗೆಯ ಎಚ್ಚರಿಕೆ ಅಗತ್ಯ ಎಂದು ಬೆಂಗಳೂರು ವಿಶ್ವವಿದ್ಯಾನಿಲಯ ಮಾಜಿ ಕುಲಪತಿ ಹಾಗೂ ಕಲಬುರ್ಗಿಯ ಕೇಂದ್ರೀಯ ವಿದ್ಯಾಲಯದ ಮಾಜಿ ಕುಲಾಧಿಪತಿಗಳಾದ ಡಾ.ಎನ್.ಆರ್ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಅವರು ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ‘ನೈವೇದ್ಯ ಸುಧಾ’ ಮೆಸ್ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ‘ಜ್ಞಾನಸಂಜೀವಿನಿ’ ಹೆಲ್ತ್ ಕೇರ್ ಸೆಂಟರನ್ನು ಕಾರ್ಕಳದ ಉದ್ಯಮಿ ಆಶೋಕ್ ಅಡ್ಯಂತಾಯ ಉದ್ಘಾಟಿಸಿ ಎನ್.ಆರ್‌ಶೆಟ್ಟಿಯವರ ಬೋಧನೆಯ ಕೌಶಲ್ಯವನ್ನು ಮೆಲುಕು ಹಾಕಿಕೊಂಡರು.
ಇದೇ ವೇಳೆ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡ ಕುಶಲಕರ್ಮಿಗಳನ್ನು ಗೌರವಿಸಲಾಯಿತು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸುತ್ತಾ ಶೈಕ್ಷಣಿಕವಾಗಿ ಸಾಧನೆ ಮಾಡುವವರಿಗೆ ಡಾ.ಎನ್.ಆರ್. ಶೆಟ್ಟಿಯವರ ವ್ಯಕ್ತಿತ್ವ ಸ್ಫೂರ್ತಿದಾಯಕವಾದುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಪಿಜಿಇಟಿ ಟ್ರಸ್ಟಿಗಳಾದ ಕರುಣಾಕರ್ ಶೆಟ್ಟಿ, ವಿದ್ಯಾವತಿ ಶೆಟ್ಟಿ, ಬಳ್ಳಾರಿಯ ಎಂ.ಜಿ. ಗೌಡ್, ಆಡಳಿತ ಮಂಡಳಿ ಸದಸ್ಯರಾದ ಶಾಂತಿರಾಜ್ ಜೈನ್, ಪ್ರಕಾಶ್ ಶೆಣೈ, ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲರಾದ ಉಷಾ ರಾವ್ ಯು, ಪಿ.ಆರ್.ಒ ಜ್ಯೋತಿ ಪದ್ಮನಾಬ್ ಭಂಡಿ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.