ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ-ಪಡುಕರೆಯಲ್ಲಿ ಯೂತ್ ರೆಡ್‌ಕ್ರಾಸ್ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಯಿತು. ಕೋಟ ಆರಕ್ಷಕ ಠಾಣೆಯ ಠಾಣಾಧಿಕಾರಿ ಮಧು ಬಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಉತ್ತಮ ಶೈಕ್ಷಣಿಕ ಬದುಕು ಕಟ್ಟಿಕೊಂಡು ರಾಷ್ಟ್ರನಿರ್ಮಾಣದ ಜವಾಬ್ದಾರಿ ಹೊಂದಿರುವ ಯುವಜನತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಆಸಕ್ತರಾಗುವುದು, ಆಕರ್ಷಿತರಾಗುವುದು ಕಳವಳಕಾರಿ
ವಿದ್ಯಮಾನ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿವೃಂದ ರಸ್ತೆ ಸುರಕ್ಷತೆಯ ನಿಯಮಗಳನ್ನು, ಸಾಮಾಜಿಕ ಅಪರಾಧ ತಡೆ ಕಾನೂನುಗಳನ್ನು ಉಲ್ಲಂಘಿಸುವುದು ಗಣನೀಯವಾಗಿ ಹೆಚ್ಚುತ್ತಿದ್ದು, ಈ ಕುರಿತಾಗಿ ವಿದ್ಯಾಸಂಸ್ಥೆಗಳನ್ನೊಳಗೊಂಡು ನಾಗರಿಕ ಸಮಾಜ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆ ಜಾಗೃತಗೊಳ್ಳುವಂತಾದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಬಲ್ಲದೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ.ವಿ.ಗಾಂವ್ಕರ ಯುವಜನಾಂಗಕ್ಕೆ ಕಾನೂನುಗಳ ಸ್ಪಷ್ಟ ಅರಿವು ಮತ್ತು ಕಾನೂನುಗಳನ್ನು ಉಲ್ಲಂಘಿಸಿದರೆ ಆಗುವ ಪರಿಣಾಮಗಳ ಸ್ಪಷ್ಟ ಚಿತ್ರಣ ಅತಿ ಅವಶ್ಯವೆಂದರು. ರೆಡ್‌ಕ್ರಾಸ್ ಘಟಕ ಸಂಚಾಲಕ ಡಾ. ಮನೋಜ್‌ಕುಮಾರ್.ಎಮ್ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ.ಎಮ್ ವಂದನಾರ್ಪಣೆಗೈದರು. ರಾಜಕೀಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.