ಉಡುಪಿ: ಮಹಿಳೆಯರು ಸ್ವಾವಲಂಬಿಗಳಾಗಲು ವಿಪುಲ ಅವಕಾಶಗಳಿವೆ. ಅವುಗಳಲ್ಲಿ ಬ್ಯೂಟಿ ಪಾರ್ಲರ್ ಉದ್ಯಮವು ಉತ್ತಮ ಆದಾಯವನ್ನು ತಂದುಕೊಡುವುದರ ಜೊತೆಗೆ ಕೌಶಲ್ಯವನ್ನು ನಿರಂತರ ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿಯಾಗುವ ಕ್ಷೇತ್ರವಾಗಿದೆ. ಆದರೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕಾದರೆ ಆರಂಭಿಕವಾಗಿ ಉತ್ತಮವಾದ ತರಬೇತಿಯ ಅವಶ್ಯಕತೆ ಇದೆ. ಇಂತಹ ತರಬೇತಿಯನ್ನು ಆಸಕ್ತ ಯುವಜನರಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಊಟ ವಸತಿ ಸಹಿತ ಉಚಿತವಾಗಿ ಒದಗಿಸುತ್ತಿದೆ ಎಂದು ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಣಿಪಾಲ ಉಪ ಮಹಾ ಪ್ರಬಂಧಕ ಪ್ರದೀಪ್ ಆರ್ ಭಕ್ತ ಹೇಳಿದರು.
೩೦ ದಿನಗಳ ಕಾಲ ಮಹಿಳೆಯರಿಗಾಗಿ ನಡೆದ ಬ್ಯೂಟಿಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರವನ್ನು ವಿತರಿಸಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಬಿರಾರ್ಥಿಗಳಾದ ಪ್ರಜ್ಞಾ, ಜಯಶ್ರೀ, ಕವಿತಾ ಮತ್ತು ಮೇಘನಾ ತರಬೇತಿಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕರಾದ ಸವಿತಾ ಎಸ್ ನಾಯಕ್ ಸ್ವಾಗತಿಸಿ, ಸಂಸ್ಥೆಯ ಕಛೇರಿ ಸಹಾಯಕರಾದ ಸಂತೋಷ್ ವಂದಿಸಿದರು. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.