ಕೋಟ: ಶ್ರೀ ಶಾಂಭವಿ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಕೋಟ ಇದರ ಶತಮಾನೋತ್ಸವ ಕಾರ್ಯಕ್ರಮ 2024ರ ಜರಗಲಿದ್ದು ಅದರ ಪೂರ್ವತಯಾರಿ ಹಾಗೂ ಶಾಲಾ ಕಟ್ಟಡ ನವೀಕರಣದ ಕುರಿತು ಪೂರ್ವಭಾವಿ ಸಭೆ ಭಾನುವಾರ ಶಾಲೆಯ ಶೇಷಕಾರಂತ ಸಭಾಂಗಣದಲ್ಲಿ ನಡೆಯಿತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಲಿತ ಶಾಲೆಯ ಅಭಿವೃದ್ಧಿಗೆ ಪೂರ್ಣಪ್ರಮಾಣದ ಸಹಕಾರ ನೀಡುವ ಭರವಸೆ ನೀಡಿದರು. ಶಾಲಾ ಆಡಳಿತ ಮಂಡಳಿಯ ಕೋರಿಕೆಯಂತೆ ಆಂಗ್ಲ ಮಾಧ್ಯಮದ ಅನುಮತಿಯ ಕುರಿತಂತೆ ಶಿಕ್ಷಣ ಸಚಿವರ ಮೂಲಕ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ತಿರ್ಮಾನಿಸುತ್ತೇನೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ದಾನಿಗಳ ಕೊಡುಗೆ ಅನನ್ಯವಾಗಿದೆ. ತಮ್ಮ ಸಹಕಾರ ನಿರಂತರ ಇರಲಿದೆ ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಚೆನ್ನೈ ಮೂಲದ ಶಕ್ತಿ ಗ್ರೂಪ್ ಆಫ್ ಕಂಪನಿ ಶಾಲಾ ನವೀಕರಣಕ್ಕೆ 1.86ಲಕ್ಷ ಅನುದಾನ ನೀಡಲಿದ್ದು ಅದರಂತೆ ಒಂದೇ ವರ್ಷದಲ್ಲಿ ಶಾಲೆಯ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದ್ದು ಈ ಹಿನ್ನಲ್ಲೆಯನ್ನು ಮುಂದಿಟ್ಟುಕೊಂಡು 2024ರ ಶತಮಾನೋತ್ಸವ ಸಂಭ್ರಮಕ್ಕೆ ಸಿದ್ಧರಾಗುವ ಎಂದರಲ್ಲದೆ ಈ ಸಂದರ್ಭದಲ್ಲಿ ಕಟ್ಟಡ ನವೀಕರಣ ಸಮಿತಿ ರಚಿಸಿ ಕಾರ್ಯೊನ್ಮುಖವಾಗುವ ಕುರಿತು ಚರ್ಚಿಸಿದರು.
ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸಚಿನ್ ಕಾರಂತ ಶಾಲೆಯ ಅಭಿವೃದ್ಧಿಗೆ ಹಿಂದಿನ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರವನ್ನು ಕೋರಿದರು. ಆಡಳಿತದ ಮಂಡಳಿಯ ಸದಸ್ಯರಾದ ಆನಂದ್ ಸಿ ಕುಂದರ್, ಸತೀಶ್ ಕಾರಂತ್, ರಾಘವ ನಾಯಕ್, ಎಮ್ ಎನ್ ಮಧ್ಯಸ್ಥ, ಜಿ.ವಿ ಅಶೋಕ್ ಹೇರ್ಳೆ, ಶ್ರೀಕಾಂತ್ ಶೆಣೈ, ಅನ್ನದಾಯಿನಿ ಟ್ರಸ್ಟ್ ಸದಸ್ಯರಾದ ಕೋಟ ಇಬ್ರಾಹಿಂ ಸಾಹೇಬ್, ಶಾಲಾ ಶಿಕ್ಷಕರು, ಹಿಂದಿನ ವಿದ್ಯಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.