ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಇಂದು ನಡೆದ ಎರಡನೆಯ ಏಕದಿನ ಪಂದ್ಯದಲ್ಲಿ ಭಾರತ 44 ರನ್ನುಗಳ ಭರ್ಜರಿ ಗೆಲುವಿನೊಂದಿಗೆ ಸರಣಿ ಗೆದ್ದುಕೊಂಡಿದೆ. ತನ್ಮೂಲಕ ಸರಣಿಯ ಮೂರನೆಯ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್, ರೋಹಿತ್ ಶರ್ಮಾ ಪಡೆಯನ್ನು ಕಟ್ಟಿಹಾಕುವಲ್ಲಿ ಆರಂಭಿಕ ಯಶಸ್ಸನ್ನು ಕಂಡಿತು.
ಕೇವಲ 43 ರನ್ ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಭಾರತವನ್ನು ಸೂರ್ಯಕುಮಾರ್ ಯಾದವ್-ಕೆ.ಎಲ್ ರಾಹುಲ್ ಜೋಡಿ ಆಧರಿಸಿದ ಪರಿಣಾಮ 4ನೇ ವಿಕೆಟಿಗೆ ಉತ್ತಮ ಜತೆಯಾಟಕ್ಕೆ ಪಂದ್ಯ ಸಾಕ್ಷಿಯಾಯಿತು.
ಸೂರ್ಯಕುಮಾರ್ ಯಾದವ್ 64, ರಾಹುಲ್ 49 ಕ್ಕೆ ನಿರ್ಗಮಿಸಿದರು. 50 ಓವರ್ ಅಂತ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು.
ಸುಲಭದ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ವಿಂಡೀಸ್ ಗೆ ಕರ್ನಾಟಕ ಎಕ್ಸ್ಪ್ರೆಸ್ ಖ್ಯಾತಿಯ ವೇಗಿ ಪ್ರಸಿದ್ ಕೃಷ್ಣ ಕಾಡಲು ಆರಂಭಿಸಿದರು. 9 ಓವರ್ ಎಸೆದ ಕೃಷ್ಣ 3 ಓವರ್ ಗಳಲ್ಲಿ ಯಾವುದೇ ರನ್ ನೀಡದೆ ಕೇವಲ್ 12 ರನ್ನಿಗೆ 4 ವಿಕೆಟ್ ಕಬಳಿಸಿ ಮಿಂಚಿದರು. 46 ಓವರ್ ಗಳಲ್ಲಿ ವೆಸ್ಟ್ ಇಂಡೀಸ್ 193ಕ್ಕೆ ಸರ್ವಪತನವಾಗುವ ಮೂಲಕ ರೋಹಿತ್ ಶರ್ಮಾ ಪಡೆಯ ವಿರುದ್ಧ ಸೋಲನ್ನು ಅನುಭವಿಸಿದೆ.