ಮಂಗಳೂರು: ನೀರುಮಾರ್ಗ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬೊಂಡಂತಿಲ ಗ್ರಾಮದ ಬಾಳಿಕೆ ಮನೆ ಚೂಡಾಮಣಿ ಶೆಟ್ಟಿಯವರ ಗದ್ದೆಯಲ್ಲಿನ ಶಾಸನವನ್ನು ಬೊಂಡಂತಿಲ ಗುತ್ತು ಅಶ್ವಿನ್ ಶೆಟ್ಟಿಯವರ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಉಡುಪಿ (ಎ.ಒ.ಎಂ ನ ಅಂಗಸಂಸ್ಥೆ) ಇದರ ಅಧ್ಯಯನ ನಿರ್ದೇಶಕ ಎಸ್. ಎ. ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿರುತ್ತಾರೆ.
ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ, 29 ಸಾಲುಗಳನ್ನು ಹೊಂದಿರುವ ಈ ಶಾಸನವು ಗ್ರಾನೈಟ್ ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. ಶಾಸನವು ಶಕವರುಷ 1312ನೆ ಶುಕ್ಲ ಸಂವತ್ಸರದ ಮೇಷ ಮಾಸ 1 ಸೋಮವಾರ (ಕ್ರಿ.ಶ 1390) ಎಂಬ ಕಾಲಮಾನದಾಗಿದ್ದು ವಿಜಯನಗರ ದೊರೆ ಇಮ್ಮಡಿ ಹರಿಹರನ ಕಾಲಕ್ಕೆ ಸೇರಿದೆ. ಮಂಗಳೂರು ರಾಜ್ಯವನ್ನು ಮಲಗರಸನು ಆಳ್ವಿಕೆ ಮಾಡುತ್ತಿರುವ ಸಂದರ್ಭದಲ್ಲಿ ವಾಮಂಜೂರಿನ ಶ್ರಿ ಅಮ್ರುತನಾಥ ದೇವರಿಗೆ ಕದಂಬ ವಂಶದ ಕಾಮದೇವರಸನ ಕುಮಾರಿ ಪದುಮಳ ದೇವಿಯು ನೀಡಿದ ಭೂದಾನ ಹಾಗೂ ಬ್ರಾಹ್ಮಣ ಭೋಜನಕ್ಕೆ ನೀಡಿರುವಂತಹ ದಾನದ ಬಗ್ಗೆ ತಿಳಿಸುತ್ತದೆ.
ಈ ಭೂಮಿಯನ್ನು ಓಮಂಜೂರು ಕುತ್ಯಡಿಯ ದಾಬ ಹೆಗ್ಗಡೆ ಮತ್ತು ಕೈಯಕಂಬಳಿಯ ಬಂಕಿನಾಥನಿಂದ ಪಡೆದುಕೊಳ್ಳಲಾಗಿದೆ ಎಂಬುದು ಶಾಸನದಿಂದ ತಿಳಿಯುತ್ತದೆ. ಶಾಸನದಲ್ಲಿ ಉಲ್ಲೇಖಗೊಂಡ ಓಮಂಜೂರು ಮತ್ತು ಕೈಯಕಂಬಳಿ ಎಂಬುದು ಪ್ರಸ್ತುತ ಕರೆಯಲ್ಪಡುವ ‘ವಾಮಂಜೂರು’ ಮತ್ತು ‘ಕೈಕಂಬ’ದ ಪ್ರಾಚೀನ ಹೆಸರುಗಳೆಂದು ಸಂಶೋಧನಾರ್ಥಿಯು ತಿಳಿಸಿದ್ದಾರೆ.
ಶಾಸನದ ಮಹತ್ವ: ಅಧ್ಯಯನದ ದೃಷ್ಟಿಯಿಂದ ಈ ಶಾಸನವು ಬಹಳ ಮಹತ್ವದ್ದಾಗಿದ್ದು, ಪತ್ತೆಯಾದ ಶಾಸನದ ಯಥಾ ಪಠ್ಯವು ವಾಮಂಜೂರು ಶ್ರೀ ಅಮೃತೇಶ್ವರ ದೇವಾಲಯದಲ್ಲಿನ 73 ಸಾಲಿನ ಶಾಸನದ ಪಠ್ಯವೇ ಆಗಿರುತ್ತದೆ. ಅದರಲ್ಲಿನ 29 ಸಾಲುಗಳನ್ನು ಯಥಾವತ್ತಾಗಿ ಈ ಶಾಸನದಲ್ಲಿ ಕೆತ್ತಲಾಗಿದೆ.
ಶಾಸನವನ್ನು ಮಾಡುವ ಸಂದರ್ಭದಲ್ಲಿ ವಿಷಯದ ದೃಷ್ಟಿಯಿಂದ ಶಿಲೆಯ ಅಳತೆ ಕಡಿಮೆ ಎಂದು ಕಂಡು ಬಂದಾಗ ಈ ಶಾಸನವನ್ನು ಒಂದೇ ಶಿಲೆಯಲ್ಲಿ ಮಾಡಿ ಅಮೃತೇಶ್ವರ ದೇವಾಲಯದಲ್ಲಿ ಸ್ಥಾಪಿಸಿರಬಹುದು ಅಥವಾ ದೇವಾಲಯಕ್ಕೆ ಬಿಟ್ಟಂತಹ ದಾನದ ಭೂಮಿಯಲ್ಲಿ ಕೂಡ ಶಾಸನದ ದಾನ ಪ್ರತಿ ಇರಲಿ ಎಂದು ಶಾಸನವನ್ನು ಮಾಡಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯ ಪಡುತ್ತಾರೆ.
ಒಂದು ಶಿಲಾಶಾಸನದ ಯಥಾ ಪ್ರತಿ ಮತ್ತೊಂದು ಶಿಲಾಶಾಸನದಲ್ಲಿ ದೊರೆಯುವುದು ಬಹಳ ಅಪರೂಪವಾಗಿದೆ ಎಂದು ವಿದ್ವಾಂಸರುಗಳು ಅಭಿಪ್ರಾಯ ಪಟ್ಟಿರುತ್ತಾರೆ.ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ, ಹರ್ಷರಾಜ್ ಮೇಲಂಟ, ಕೀರ್ತನಾ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಸಹಕಾರ ನೀಡಿರುತ್ತಾರೆ.