ಉಡುಪಿ: ಫ್ರೆಂಡ್ಸ್ ಗ್ರೂಪ್ ಉಡುಪಿ ಮತ್ತು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಜಂಟಿಯಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿರುವ ಬೃಹತ್ ರಕ್ತದಾನ ಶಿಬಿರವು ಯು.ಪಿ.ಎಂ.ಸಿಯಲ್ಲಿ ನಡೆಯಿತು.
ಮಣಿಪಾಲದ ಕೆ. ಎಂ.ಸಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಗಳಾದ ಡಾ. ಆಸ್ನಾ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊರೋನ ಸಂಕಷ್ಟದ ದಿನಗಳಲ್ಲಿ ಕ್ಯಾನ್ಸರ್ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವವರಿಗೆ ರಕ್ತವು ಅತ್ಯವಶ್ಯವಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಮಾಜವು ಮಾಡುವ ಸ್ವಯಂ ಪ್ರೇರಿತ ರಕ್ತದಾನವು ಅತ್ಯಮೂಲ್ಯವಾಗಿದೆ ಎಂದು ಹೇಳಿದರು.
ಫ್ರೆಂಡ್ಸ್ ಕ್ಲಬ್ ಉಡುಪಿ ಇದರ ಗೌರವಾಧ್ಯಕ್ಷರಾದ ವಸಂತರಾವ್ ಕರಂಬಳ್ಳಿ, ಅಧ್ಯಕ್ಷರಾದ ಸುನಿಲ್, ಸಂದೀಪ್ ಹಾಗೂ ಫ್ರೆಂಡ್ಸ್ ಗ್ರೂಪ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದರು. ಎನ್.ಎಸ್.ಎಸ್ ಘಟಕದ ಸಹ ಯೋಜನಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿ, ಯೋಜನಾಧಿಕಾರಿ ರಾಜೇಶ್ ಕುಮಾರ್ ವಂದಿಸಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಜಿ ಕಾರ್ಯಕ್ರಮ ನಿರೂಪಿಸಿದರು.