ಉಡುಪಿ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದುಡಿಯುವ ಶಕ್ತಿಯನ್ನು ಕಳೆದುಕೊಂಡಾಗ, ಪ್ರತಿ ತಿಂಗಳೂ ಜೀವನ ನಿರ್ವಹಣೆಗಾಗಿ ನಿಶ್ಚಿತ ಮಾಸಿಕ ಆದಾಯ ಬರುವಂತಿರಬೇಕು ಎಂಬ ಆಶಯ ಹೊಂದಿರುತ್ತಾನೆ. ಸರ್ಕಾರಿ ನೌಕರರಿಗಾದರೆ ಸರ್ಕಾರವೇ ಪ್ರತೀ ತಿಂಗಳೂ ನಿವೃತ್ತಿ ವೇತನ ನೀಡುತ್ತದೆ. ಆದರೆ ಯಾವುದೇ ಉದ್ಯೋಗ ಭದ್ರತೆ ಇಲ್ಲದ ಅಸಂಘಟಿತ ಕಾರ್ಮಿಕರು ಮತ್ತು ಸ್ವಯಂ ಉದ್ಯೋಗಿಗಳು ತನ್ನ ದುಡಿಮೆಯ ಅವಧಿಯಲ್ಲಿ ಸಾಕಷ್ಟು ಹಣವನ್ನೂ ಕೂಡಿಡಲೂ ಆಗದೇ ಜೀವನದ ಸಂಧ್ಯಾಕಾಲದಲ್ಲಿ ಆರ್ಥಿಕ ಸಂಕಷ್ಠಕ್ಕೆ ಸಿಲುಕುತ್ತಾರೆ. ಇವರು ಪಿಂಚಣಿ ಸೌಲಭ್ಯದಿಂದ ವಂಚಿತರಾಗುವುದನ್ನು ತಡೆಯಲು ಇವರಿಗೂ ಸಹ 60 ವರ್ಷದ ನಂತರ ಸರ್ಕಾರದಿಂದಲೇ ಪಿಂಚಣಿ ಪಡೆಯುವ ಯೋಜನೆ ಲಭ್ಯವಿದೆ.
ಭಾರತ ದೇಶದ ಶೇಕಡ 50 ರಷ್ಟು ಆದಾಯವು ಅಸಂಘಟಿತ ವಲಯದ ಅಂದಾಜು 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದ್ದು, ಅಸಂಘಟಿತ ವಲಯದಲ್ಲಿ ಗೃಹ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು,ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಳ ಕೆಲಸ ನಿರ್ವಹಿಸುತ್ತಿರುವವವರು ಸೇರುತ್ತಾರೆ.
ಈ ಕಾರ್ಮಿಕರಿಗೆ ಅವರ ಜೀವನದ ಸಂಧ್ಯಾಕಾಲದಲ್ಲಿ ದುಡಿದು ಪೋಷಿಸಿಕೊಳ್ಳಲು ನಿಶ್ಚಿತ ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಎಂ.ಎಸ್.ವೈ.ಎಂ) ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆ ನೆರವಾಗಲಿದೆ.
18-40 ವರ್ಷದೊಳಗಿನ, ಮಾಸಿಕ 15,000 ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ, ಆದಾಯ ತೆರಿಗೆ ಪಾವತಿದಾರರಾಗಿರದ ಹಾಗೂ ಇ.ಎಸ್.ಐ, ಇ.ಪಿ.ಎಫ್, ಎನ್.ಪಿ.ಎಸ್ ಯೋಜನೆಯ ಫಲಾನುಭವಿಗಳಾಗಿರದೇ ಇರುವ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಕಾರ್ಮಿಕರು ಪ್ರತೀ ತಿಂಗಳು ವಂತಿಗೆ ಪಾವತಿ ಮಾಡುವುದರ ಮೂಲಕ, 60 ವರ್ಷದ ನಂತರ ವಾರ್ಷಿಕ 36,000 ರೂ.ಪಿಂಚಣಿ ಪಡೆಯಬಹುದಾಗಿದೆ.
ಅಲ್ಲದೇ ವ್ಯಾಪಾರಿ, ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಢ ನಂತರ ಮಾಸಿಕ 3,000 ರೂ.ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಅವರುಗಳಿಗೆ ಆರ್ಥಿಕ ಭದ್ರತೆಯನ್ನು ನೀಡಲು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿಯೋಜನೆ(ಎನ್.ಪಿ.ಎಸ್-ಟ್ರೇರ‍್ಸ್) ಎಂಬ ವಂತಿಗೆ ಆಧಾರಿತ ಯೋಜನೆ ಕೂಡಾ ಜಾರಿಗೆ ಬಂದಿದ್ದು, 18-40 ವರ್ಷದೊಳಗಿನ, ವಾರ್ಷಿಕ ವಹಿವಾಟು 1.5 ಕೋಟಿ ರೂ. ಒಳಗಿರುವ, ಆದಾಯ ತೆರಿಗೆ ಪಾವತಿಸದ, ಇ.ಎಸ್.ಐ, ಇ.ಪಿ.ಎಫ್, ಎನ್.ಪಿ.ಎಸ್, ಪಿ.ಎಂ.ಎಸ್.ವೈ.ಎಂ, ಪಿ.ಎಂ.ಕೆ.ಎಂ.ವೈ ಯೋಜನೆಯ ಸೌಲಭ್ಯ ಪಡೆಯದೇ ಇರುವ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಈ ಯೋಜನೆಯಡಿ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಗಿರಿಣಿ ಮಾಲೀಕರು. ಎಣ್ಣೆ ಗಿರಣಿ ಮಾಲೀಕರು, ವರ್ಕ್ಶಾಪ್ ಮಾಲೀಕರು, ಕಮಿಷನ್ ಏಜೆಂಟ್ಸ್, ರಿಯಲ್ ಎಸ್ಟೆಟ್‌ನ ಬ್ರೋಕರ್, ಸಣ್ಣ ಹೋಟೇಲ್ ಹಾಗೂ ರೆಸ್ಟೋರೆಂಟ್‌ನ ಮಾಲೀಕರು ಹಾಗೂ ಅಂತಹ ಇತರೆ ಸಣ್ಣ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು ವ್ಯಾಪಾರಿಗಳು / ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಗಳು ಫಲಾನುಭವಿಗಳಾಗುತ್ತಾರೆ.
ಈ ಎರಡೂ ಪಿಂಚಣಿ ಯೋಜನೆಗಳನ್ನು ಕಾಮನ್ ಸರ್ವಿಸ್ ಸೆಂಟರ್ (ಸಾಮಾನ್ಯ ಸೇವಾ ಕೇಂದ್ರ ) ಗಳಲ್ಲಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ನಾಮ ನಿರ್ದೇಶಿತರ ವಿವರಗಳೊಂದಿಗೆ ಮಾಸಿಕ ವಂತಿಗೆ ಪಾವತಿಸುವುದರ ಮೂಲಕ ನೊಂದಾಯಿಸಕೊಳ್ಳಬಹುದಾಗಿದೆ. ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಿ, ನಂತರದ ತಿಂಗಳುಗಳಲ್ಲಿ ವಂತಿಕೆದಾರರ ಬ್ಯಾಂಕ್ ಖಾತೆಗಳಿಂದ ಆಟೋ ಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ.
ಯೋಜನೆಗೆ ನೊಂದಣಿ ಹೇಗೆ: ಈ ಯೋಜನೆಗಳಿಗೆ ನೊಂದಣಿ ಮಾಡಿಕೊಳ್ಳಲು ಫಲಾನುಭವಿಗಳು ,ತಮ್ಮ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ ಮತ್ತು ನಾಮ ನಿರ್ದೇಶಿತರ ವಿವರಗಳೊಂದಿಗೆ ಸಮೀಪದ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ನೊಂದಾವಣಿ ಮಾಡಿಕೊಳ್ಳಬಹುದು.
ಯೋಜನೆಯ ಸೌಲಭ್ಯಗಳು: ವಂತಿಕೆದಾರರು ತಿಂಗಳಿಗೆ ಪಾವತಿಸಬೇಕಾದ ವಂತಿಕೆಯನ್ನು ಫಲಾನುಭವಿಯ ವಯಸ್ಸಿನ ಆಧಾರದ ಮೇಲೆ ನಿಗಧಿಪಡಿಸಲಾಗಿದ್ದು, ಕನಿಷ್ಠ 55 ರೂ. ಹಾಗೂ ಗರಿಷ್ಠ 200 ರೂ. ಆಗಿರುತ್ತದೆ.ಕೇಂದ್ರ ಸರ್ಕಾರವು ವಂತಿಕೆದಾರರು ಮಾಹೆಯಾನ ಪಾವತಿಸುವ ವಂತಿಕೆಗೆ ಸಮನಾಂತರ ವಂತಿಕೆಯನ್ನುಅವರವರ ಪಿಂಚಣಿಖಾತೆಗೆ ಪಾವತಿಸುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಫಲಾನುಭವಿಯು ತಿಂಗಳಿಗೆ ನಿಶ್ಚಿತ 3000 ರೂ.ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು, ಅವರು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಸಂಪೂರ್ಣ ದುರ್ಬಲತೆ ಹೊಂದಿ, ವಂತಿಕೆ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಫಲಾನುಭವಿಯ ಸಂಗಾತಿಯು ನಂತರವೂ ಯೋಜನೆಗೆ ಸೇರಬಹುದಾಗಿದ್ದು, ವಂತಿಕೆಯನ್ನು ಪಾವತಿಸಿ ಮುಂದುವರೆಸಬಹುದು ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿರುತ್ತಾರೆ.
ಪಿಂಚಣಿ ದೊರೆಯಲು ಆರಂಭಗೊಂಡ ನಂತರ ವಂತಿಕೆದಾರರು ಮೃತಪಟ್ಟಲ್ಲಿ, ಅವರ ಪತ್ನಿ ಅಥವಾ ಪತಿ ಪಿಂಚಣಿಯ ಶೇ.50 ರಷ್ಟು ಪಿಂಚಣಿಯನ್ನು ಪಡೆಯಬಹುದು. ವಂತಿಕೆದಾರರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ ಯೋಜನೆಯಿಂದ ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯು ವಿದ್ಯುನ್ಮಾನ ಆಧಾರಿತವಾಗಿದ್ದು, ಎಸ್.ಎಂ.ಎಸ್ ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲ ಕಾಲಕ್ಕೆ ತಿಳಿಸಲಾಗುವುದು.
“ಉಡುಪಿ ಜಿಲ್ಲೆಗೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ (ಪಿ.ಎಮ್.ಎಸ್.ವೈ.ಎಮ್) ಯಡಿ 24,700 ಹಾಗೂ ಎನ್.ಪಿ.ಎಸ್-ಟ್ರೇರ‍್ಸ್ ಯೋಜನೆಯಡಿ 5300 ಮಂದಿಯನ್ನು ನೋಂದಣಿ ಮಾಡಿಸಲು ಗುರಿ ನಿಗಧಿಪಡಿಸಲಾಗಿದ್ದು, ಅರ್ಹ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಸ್ವಯಂ ಉದ್ಯೋಗಿಗಳು ಹಾಗೂ ವ್ಯಾಪಾರಿಗಳು ಈ ಪಿಂಚಣಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಜೀವನದ ಸಂಧ್ಯಾ ಕಾಲದಲ್ಲಿ ನಿಶ್ಚಿತ ಪಿಂಚಣಿ ಪಡೆಯುವ ಮೂಲಕ, ನೆಮ್ಮದಿಯ ಜೀವನ ನಡೆಸಬಹುದು“–ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್