ಉಡುಪಿ: ಮಡಿವಾಳ ಮಾಚಿದೇವರಂತಹ ಮಹಾನ್ ಪುರುಷರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕರೆ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
12 ನೇ ಶತಮಾನದಲ್ಲಿಯೇ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದ ಮಡಿವಾಳ ಮಾಚಿದೇವ ಅವರು, ಮಹಿಳೆಯರಿಗೆ ಸಮಾನತೆ ಕಲ್ಪಿಸಬೇಕೆಂಬ ಅರಿವಿನ ಸಂದೇಶವನ್ನು ನೀಡಿದ್ದರು. ಪ್ರಕೃತಿ ಸೊಬಗನ್ನು ಸಂರಕ್ಷಿಸುವ ಬಗ್ಗೆ ಸಾರಿದ್ದ ಅವರು ಉತ್ತಮ ಪ್ರಕೃತಿಯನ್ನು ಉಳಿಸಿಕೊಂಡರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದಿದ್ದರು. ಇದು ಸರ್ವಕಾಲಿಕ್ಕೂ ಹಾಗೂ ಪ್ರಸ್ತುತವಾಗಿದೆ ಎಂದರು.
ಮಡಿವಾಳ ಮಾಚಿದೇವರು ಕಾಯಕ, ನಿಷ್ಠೆಗೆ ಹೆಚ್ಚಿನ ಮಹತ್ವ ನೀಡಿದ್ದು, ಅವರ ಸಂದೇಶಗಳನ್ನು ನಮ್ಮ ದೈನಂದಿನ ಕಾರ್ಯದಲ್ಲಿ ಹಾಗೂ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ರಜಕ ಯಾನೆ ಮಡಿವಾಳ ಸಂಘದ ಅಧ್ಯಕ್ಷ ಪ್ರದೀಪ್ ಸಾಗರ್ ಮಾತನಾಡಿ, 12 ನೇ ಶತಮಾನದಲ್ಲಿ ಬಸವಣ್ಣನ ಸಮಕಾಲೀನರಾಗಿದ್ದ ಮಡಿವಾಳ ಮಾಚಿದೇವರು ಅನುಭವ ಮಂಟಪದಲ್ಲಿ ಸಹಾ ಭಾಗಿಯಾಗಿದ್ದರು. ಬದುಕಿಗೆ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದರು. ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂಬುವುದನ್ನು ಸಾರಿದ್ದ ಅವರು, ಸಮಾಜದಲ್ಲಿನ ಅಸ್ಪೃಶ್ಯತೆಯ ವಿರುದ್ಧ ಸಮರ ಸಾರಿ, ವಚನ ಸಾಹಿತ್ಯದ ಸಂರಕ್ಷಣೆಗೆ ಮುಂದಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ, ಸರಕಾರದ ಸೌಲಭ್ಯಗಳನ್ನು ಒದಗಿಸಬೇಕೆಂಬ ಮನವಿಯನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ವಾರ್ತಾಧಿಕಾರಿ ಬಿ. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.