ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ ಕರ್ನಾಟಕದ ರೈತ, ಟನಲ್ ಮ್ಯಾನ್ ಖ್ಯಾತಿಯ ಅಮೈ ಮಹಾಲಿಂಗ ನಾಯ್ಕ ಅವರ ಭಗೀರಥ ಪ್ರಯತ್ನ ರೈತರಿಗೆ ಪ್ರೇರಣೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮನ್ ಕಿ ಬಾತ್ ನಲ್ಲಿ ಹೇಳಿದರು. ಅಮೈ ಮಹಾಲಿಂಗ ನಾಯ್ಕ ಕೃಷಿಯಲ್ಲಿ ಅಚ್ಚರಿಯ ಆವಿಷ್ಕಾರಗಳನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಮಹಾತ್ಮಾ ಗಾಂಧಿಜಿಯವರ ಪುಣ್ಯತಿಥಿ. ಜನವರಿ 30 ಬಾಪು ಅವರ ಬೋಧನೆಗಳು ಎಲ್ಲರಿಗೂ ನೆನಪಿಸುತ್ತದೆ ಎಂದು ಮೋದಿ ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಪ್ರಯುಕ್ತ ಜನವರಿ 23 ರಿಂದ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಿವೆ.
ಇಂಡಿಯಾ ಗೇಟ್‌ನಲ್ಲಿ ನೇತಾಜಿಯವರ ಡಿಜಿಟಲ್ ಶಿಲ್ಪವನ್ನು ಸಹ ಸ್ಥಾಪಿಸಲಾಗಿದೆ ಮತ್ತು ಇದನ್ನು ಉತ್ಸಾಹದಿಂದ ಸ್ವಾಗತಿಸಿದ್ದಕ್ಕಾಗಿ ಜನರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು. ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಈ ಪ್ರಯತ್ನಗಳ ಮೂಲಕ ಭಾರತವು ತನ್ನ ರಾಷ್ಟ್ರೀಯ ಚಿಹ್ನೆಗಳನ್ನು ಮರುಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು.
ಅಮರ್ ಜವಾನ್ ಜ್ಯೋತಿಯಂತೆ ದೇಶದ ಹುತಾತ್ಮ ಯೋಧರ ಸ್ಫೂರ್ತಿ, ಕೊಡುಗೆಯೂ ಅಮರವಾಗಿದೆ ಎಂದರು. ಶಕ್ತಿ ಮತ್ತು ಸ್ಫೂರ್ತಿ ಪಡೆಯಲು ಪ್ರತಿಯೊಬ್ಬರೂ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಬೇಕು.
ಮನ್ ಕಿ ಬಾತ್ ಪೋಸ್ಟ್ ಕಾರ್ಡ್ ಮೂಲಕ ಒಂದು ಕೋಟಿಗೂ ಹೆಚ್ಚು ಮಕ್ಕಳು ತಮಗೆ ಪತ್ರ ಬರೆದಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಪೋಸ್ಟ್ ಕಾರ್ಡ್‌ಗಳು ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಬಂದಿವೆ. ದೇಶದ ಭವಿಷ್ಯದ ಬಗ್ಗೆ ಹೊಸ ಪೀಳಿಗೆಯ ದೃಷ್ಟಿ ಎಷ್ಟು ವಿಶಾಲವಾಗಿದೆ ಎಂಬುದನ್ನು ಈ ಪೋಸ್ಟ್ ಕಾರ್ಡ್‌ಗಳು ತೋರಿಸುತ್ತವೆ ಎಂದು ಅವರು ಹೇಳಿದರು.
ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ಬಳಸಬೇಡಿ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ ಎಂದು ಪ್ರಧಾನಮಂತ್ರಿ ಕರೆ ನೀಡಿದರು. ಆತ್ಮನಿರ್ಭರ ಭಾರತ ಅಭಿಯಾನಕ್ಕಾಗಿ ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕೆಂದರು.