ಉಡುಪಿ: ಕರಾಟೆ ಬುಡೋಕೋನ್ ಇದರ ವತಿಯಿಂದ ಗದಗದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಮಗ್ರ ಚಾಂಪಿಯನ್ಶಿಪ್ ಪಡೆದ ಪರ್ಕಳ ಪಿಕೆಎಸ್ ಕರಾಟೆ ತಂಡಕ್ಕೆ ಅಭಿನಂದನಾ ಸಮಾರಂಭ ಇಂದು ನಡೆಯಿತು. ರೋಟರಿ ಕ್ಲಬ್ ಮಣಿಪಾಲ ವತಿಯಿಂದ ಕರಾಟೆ ತಂಡಕ್ಕೆ ಆರ್ಥಿಕ ನೆರವು ನೀಡಲಾಯಿತು.
ರೋಟರಿ ಅಧ್ಯಕ್ಷ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಮಕ್ಕಳ ಸಾಧನೆ ಅಭಿನಂದನಾರ್ಹ. ಕರಾಟೆ ಶಿಕ್ಷಣದ ಮೂಲಕ ಆತ್ಮಸ್ಥೈರ್ಯ ಬೆಳೆಸಬಹುದು. ಮುಂದಿನ ಜೀವನದಲ್ಲಿ ಯಾವುದೇ ರೀತಿಯ ದುರಭ್ಯಾಸಗಳಿಗೆ ಒಳಗಾಗದೆ ಹೆಚ್ಚಿನ ಸಾಧನೆ ಮಾಡಬೇಕು. ಮಕ್ಕಳಿಗೆ ಬೆಂಬಲ, ಪ್ರೋತ್ಸಾಹ ನೀಡಿದ್ದಲ್ಲಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಡಾ. ಗಿರಿಜಾ ಮಾತನಾಡಿ, ಕರಾಟೆ ಕೇವಲ ದೈಹಿಕ ರಕ್ಷಣೆಯ ಕ್ರೀಡೆಯಲ್ಲ, ಅದು ಮನಸ್ಸನ್ನು ಕೇಂದ್ರಿಕರಣ ಮಾಡುವ ಆಟವಾಗಿದೆ ಎಂದರು. ಕರಾಟೆ ಶಿಕ್ಷಕಿ ಪ್ರವೀಣ ಸುವರ್ಣ, ಡಾ. ವೀಣಾ, ರಹಿಮಾನ್, ಶ್ರೀಪತಿ, ಕರ್ನಲ್ ಮಾಧವ ಶಾನುಭಾಗ್, ರಾಘವೇಂದ್ರ ಪ್ರಭು ಕರ್ವಾಲು, ಮುಂತಾದವರು ಉಪಸ್ಥಿತರಿದ್ದರು.