ಮಂಗಳೂರು: ದಾನಶೀಲತೆ, ಸರಳತೆ, ದೈವಭಕ್ತಿ, ಸಮಾಜಸೇವೆಗಳಿಗೆ ಸಾಕಾರರಾಗಿದ್ದ ಅಸಾಮಾನ್ಯ ದೈವೀ ಚೈತನ್ಯ ರೂಪರು, ವಿವಿಧ ರೀತಿಯಲ್ಲಿ ಸಹಾಯ, ಸಹಕಾರ, ಮಾರ್ಗದರ್ಶನ ನೀಡಿದ ನೈಜ ಭಕ್ತರಾಗಿ ಸಾಯಿರಾಂ ಭಟ್ಟರೆಂಬ ಶಬ್ಧಕ್ಕೆ ಸಾರ್ಥಕರೆನಿಸಿದ ಕಿಳಿಂಗಾರು ಗೋಪಾಲಕೃಷ್ಣ ಭಟ್ಟರ ನಿಧನವು ದೊಡ್ಡನಷ್ಟ. ಅವರ ಅನುಕರಣೀಯ ಆದರ್ಶಗಳು ಮುಂದುವರಿಯಲಿ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಪ್ರತಿಷ್ಠಾನವು ಸಮರ್ಪಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿದರು.
ಭಟ್ಟರ ದೀರ್ಘಕಾಲದ ಸಂಪರ್ಕವನ್ನು ನೆನಪಿಸಿ ವ್ಯಕ್ತಿತ್ವ ಚಿತ್ರಿಸಿ ಗುಣಗಾನಗೈದ ಪ್ರೊ. ಎಂ.ಬಿ. ಪುರಾಣಿಕರು, ಸಾಯಿರಾಂ ಭಟ್ಟರು ದೈವೀ ಪುರುಷರೆಂದು ಹೇಳಿದರು. ವಿವಿಧ ರಂಗಗಳ ಪ್ರತಿನಿಧಿಗಳಾದ ಡಾ. ಎಂ. ಪ್ರಭಾಕರ ಜೋಶಿ, ಜಿ.ಕೆ. ಭಟ್ ಸೇರಾಜೆ, ಪ್ರಭಾಕರ ರಾವ್ ಪೇಜಾವರ, ಶ್ರೀಕಾಂತ ನೆಟ್ಟಣಿಗೆ, ಸುಧಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ಭಟ್, ತಾರಾನಾಥ ಹೊಳ್ಳ, ಶ್ರೀಧರ ಹೊಳ್ಳ, ನಿತ್ಯಾನಂದ ಕಾರಂತ ಪೊಳಲಿ, ವಿಷ್ಣು ಭಟ್, ಚಂದ್ರಶೇಖರ ಕುಳಮರ್ವ, ಕೌಶಿಕ್ ಕಲ್ಲೂರಾಯ ಮೊದಲಾದವರು ಭಟ್ಟರ ಬದುಕಿನ ಮುಖಗಳನ್ನು ವಿರ್ಮಶಿಸಿ ಕೊಂಡಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಪುಷ್ಪನಮನ ಸಲ್ಲಿಸಲಾಯಿತು.