ಕೋಟ: ಯಕ್ಷಗಾನದ ಮೌಲ್ಯ ಹಾಗೂ ಪರಂಪರೆಯನ್ನು ಉಳಿಸುವಲ್ಲಿ ಹವ್ಯಾಸಿ ಕಲಾವಿದರ ಕೊಡುಗೆ ಅನನ್ಯವಾಗಿದೆ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು.
ಗುರುವಾರ ಕೋಟದ ರಾಜಶೇಖರ ದೇವಳದಲ್ಲಿ ಗಿಳಿಯಾರು ಯುವಕ ಮಂಡಲ ಗಿಳಿಯಾರು ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಯೋಗದೊಂದಿಗೆ ಕೋಟ ಪಂಚವರ್ಣ ಯುವಕ ಮಂಡಲದ ಕಲಾವಿದರಿಂದ ಮಧುರಾ ಮಹೀಂದ್ರಾ ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಕಲಾರಾಧನೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯಕ್ಕೆ ಯಕ್ಷಗಾನದ ಅಭಿರುಚಿ ಬೆಳೆಸುವ ಅಗತ್ಯತೆಯನ್ನು ಮನಗಾಣಿಸಿ ಯಕ್ಷಗಾನ ಶುದ್ಧ ಕನ್ನಡದ ಭಾಷಾ ಪ್ರತೀಕವಾಗಿ ಹೊರಹೊಮ್ಮಿದ್ದು ಪ್ರತಿಯೊಬ್ಬರು ಈ ರಂಗದಲ್ಲಿ ತೊಡಗಿಸಿಕೊಂಡರೆ ಯಕ್ಷಕಲೆಯ ಜೊತೆ ಭಾಷಾಭಿಮಾನದ ಬೀಜ ಬಿತ್ತಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೋಟ ಅಮೃತೇಶ್ವರಿ ದೇವಳದ ಧರ್ಮದರ್ಶಿ ಎಂ ಸುಬ್ರಾಯ ಆಚಾರ್ಯ ಮಾತನಾಡಿ, ಯಕ್ಷಗಾನ ಕಲೆಯು ಸಂಸ್ಕೃತಿ ಅನಾವರಣಗೈಯುವ ಜೊತೆಗೆ ಪರಿಶುದ್ಧ ಭಾಷಾ ಪರಿಜ್ಞಾನ ಬೆಳೆಸುತ್ತಿದೆ. ಯಕ್ಷಗಾನವು ವಿವಿಧ ದೇವಳಗಳ ವೃತ್ತಿಪರ ಮೇಳಗಳ ಮೂಲಕ ಹರಕೆ ಸಲ್ಲಿಸುವ ಭಕ್ತಿರಂಗಕ್ಷೇತ್ರವಾಗಿದೆ. ಕೊರೋನಾದಿಂದ ಕಲಾವಿದರ ಪಾಡು ಶೋಚನೀಯ ಸ್ಥಿತಿಗೆ ತಲುಪುವಂತೆ ಮಾಡಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಗಿಳಿಯಾರು ಯುವಕ ಮಂಡಲದ ಉಪಾಧ್ಯಕ್ಷ ರಾಘವೇಂದ್ರ ಶೆಟ್ಟಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಮೃತ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ಯುವಕ ಮಂಡಲದ ಕಾರ್ಯದರ್ಶಿ ನಿತಿನ್ ಕುಮಾರ್ ಕೋಟ ಸ್ವಾಗತಿಸಿ, ಸಂಚಾಲಕ ಅಜಿತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು. ಕಾರ್ಯಕ್ರಮದ ನಂತರ ಪಂಚವರ್ಣ ಕಲಾವಿದರಿಂದ ಮಧುರಾ ಮಹೀಂದ್ರ ಯಕ್ಷಗಾನ ಪ್ರದರ್ಶನ ಜರಗಿತು.