ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ವಡ್ಡಾರ್ಸೆ ಪಂಚಾಯತಿ ವ್ಯಾಪ್ತಿಗೆ ಸೇರುವ ಬನ್ನಾಡಿ ಗ್ರಾಮದ ಹೆಬ್ಬಾರ್ ಒಳಲು ಪ್ರದೇಶದ ಗದ್ದೆಯಲ್ಲಿ ಆಳುಪ ಕಾಲದ ಶಾಸನವು ಪತ್ತೆಯಾಗಿರುತ್ತದೆ. ಈ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಉಡುಪಿ (ಎನ್.ಟಿ.ಸಿ – ಎ.ಒ.ಎಂ. ನ ಅಂಗ ಸಂಸ್ಥೆ) ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ.ಕೃಷ್ಣಯ್ಯ ಇವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ಇಂದಿರಾಗಾಂಧಿ ವಸತಿ ಶಾಲೆ- ಸಿದ್ದಾಪುರ ಇಲ್ಲಿನ ಇಂಗ್ಲೀಷ್ ಸಹ ಶಿಕ್ಷಕರಾದ ರಾಘವೇಂದ್ರ ಶೆಣೈ ಅವರು ಅಧ್ಯಯನ ನಡೆಸಿರುತ್ತಾರೆ.
ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 4 ಅಡಿ ಎತ್ತರ ಹಾಗೂ 2 ಅಡಿ ಅಗಲವಿದ್ದು, ಹೆಚ್ಚಿನ ಅಕ್ಷರಗಳು ತೃಟಿತಗೊಂಡಿರುತ್ತದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವಿದ್ದು ಇದರ ಇಕ್ಕೆಲಗಳಲ್ಲಿ ಎರಡು ಆಕಳುಗಳು ಮತ್ತು ಕೈ ಮುಗಿದು ನಿಂತಿರುವ ವ್ಯಕ್ತಿಯ ಉಬ್ಬು ಕೆತ್ತನೆಯಿದೆ.
ಶಾಸನದ ಪ್ರಾರಂಭದಲ್ಲಿ “ಶ್ರೀಮತ್ಪಾಣ್ಡ್ಯ ಚಕ್ರವರ್ತಿ” ಎಂಬ ಉಲ್ಲೇಖವಿದ್ದು, ಲಿಪಿಯ ಹಾಗೂ ಓದಲು ಸಾಧ್ಯವಾದ ಅಕ್ಷರದ ಆಧಾರದ ಮೇಲೆ ಇದು 12ನೇ ಶತಮಾನದ ದಾನ ಶಾಸನ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಮಾದರಿಯ ಶಾಸನವನ್ನು ಈ ಮೊದಲು ಬಿ.ಕುಶ ಆಚಾರ್ಯ ಕೃಷಿ ಭೂಮಿಯಲ್ಲಿ ಪತ್ತೆ ಮಾಡಲಾಗಿದೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ನವೀನ್ ಕುಲಾಲ್ ಪಡುಬೆಳ್ಳೆ, ಬಿ.ಕುಶ ಆಚಾರ್ಯ ಸಹಕಾರ ನೀಡಿರುತ್ತಾರೆ.