ನವದೆಹಲಿ: 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಗಣರಾಜ್ಯೋತ್ಸವ ಪರೇಡ್ ಅರ್ಥಪೂರ್ಣವಾಗಿ ನಡೆಯಿತು. 871 ಫೀಲ್ಡ್ ರೆಜಿಮೆಂಟ್ನ ಸೆರಿಮೋನಿಯಲ್ ಬ್ಯಾಟರಿ ಪ್ರಸ್ತುತ ಪಡಿಸಿದ ಪರೇಡ್ನ ಗೌರವ ವಂದನೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ 2020 ರಲ್ಲಿ ಶ್ರೀನಗರದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಕೊಂದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಎಎಸ್ಐ ಬಾಬು ರಾಮ್ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಲಾಯಿತು. ರಾಷ್ಟ್ರಪತಿ ಕೋವಿಂದ್ ಅವರಿಂದ ಬಾಬು ರಾಮ್ ಅವರ ಪತ್ನಿ ಮತ್ತು ಪುತ್ರ ಪ್ರಶಸ್ತಿ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮರಾದ ವೀರಯೋಧರಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಆಟೋ-ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಮತ್ತು ಮುಂಚೂಣಿಯ ಆರೋಗ್ಯ ಕಾರ್ಯಕರ್ತರನ್ನು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಆಹ್ವಾನಿಸಿದು ಈ ಬಾರಿಯ ವಿಶೇಷವಾಗಿತ್ತು.
ಭಾರತದ ಸೇನಾ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದ ಪರೇಡ್ನಲ್ಲಿ ಪ್ರದರ್ಶನಗೊಂಡಿತು. ಸೇನೆ, ನೌಕಾಪಡೆ, ವಾಯುಪಡೆ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ, ದೆಹಲಿ ಪೊಲೀಸ್, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್, ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ವಿವಿಧ ರಾಜ್ಯ ಕೇಂದ್ರಾಡಳಿತ ಪ್ರದೇಶಗಳ 12 ಸ್ತಬ್ಧಚಿತ್ರಗಳಿದ್ದವು. ಸಚಿವಾಲಯ ಮತ್ತು ಇಲಾಖೆಗಳಿಂದ ಕೂಡ ಸ್ತಬ್ಧಚಿತ್ರಗಳಿದ್ದವು.
ಲೆಫ್ಟಿನೆಂಟ್ ಮನಿಶಾ ವೋಹ್ರಾ ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ ಕಾಂಟಿಜೆಂಟ್ ಮುನ್ನಡೆಸಿದರು. ಪುರುಷರೇ ಇದ್ದಂತಹ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ನೂತನ ಇತಿಹಾಸ ನಿರ್ಮಿಸಿದರು. ಕರ್ನಾಟಕದ ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು ರಾಜಪಥದಲ್ಲಿ ಗಮನ ಸೆಳೆಯಿತು.
ವಂದೇ ಭಾರತಂ ನೃತ್ಯ ಸ್ಪರ್ಧೆಯ ಮೂಲಕ ಆಯ್ಕೆಯಾದ 480 ನೃತ್ಯಗಾರರು ರಾಜಪಥದಲ್ಲಿ ಪ್ರದರ್ಶನ ನೀಡಿದರು. ವಾಯುಪಡೆಯ ವಿಮಾನಗಳು ಆಕರ್ಷಕ ರಚನೆಗಳ ಮೂಲಕ ಸೇನಾ ಶಕ್ತಿ ಅನಾವರಣಗೊಂಡಿತು.