ಉಡುಪಿ: ನಮ್ಮ ಸಾಂವಿಧಾನಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಅತೀ ಮುಖ್ಯ. ಗಣರಾಜ್ಯೋತ್ಸವದಂತಹ ಆಚರಣೆಗಳು ಕೇವಲ ಆಚರಣೆಗಳಾಗಬಾರದು. ಇದು ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಸಾಂವಿಧಾನಿಕ ಆಶಯಗಳನ್ನು ಅರ್ಥ ಮಾಡಿಕೊಂಡು ಅನುಷ್ಠಾನ ಮಾಡಲು ಸ್ಫೂರ್ತಿಯಾಗಬೇಕು ಎಂದು ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ವಿದ್ಯಾರ್ಥಿ ಕ್ಷೇಮಪಾಲನ ಸಂಚಾಲಕ ಪ್ರೊ. ರಾಧಾಕೃಷ್ಣ ಸ್ವಾಗತಿಸಿ ನಿರೂಪಿಸಿದರು.
ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆ ಹಾಡಿದರು. ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಸುರೇಶ್ ರೈ ಕೆ., ರೋವರ್ಸ್ ರೇಂಜರ್ಸ್ ಮುಖ್ಯಸ್ಥ ಡಾ. ರಾಮಚಂದ್ರ ಪಾಟ್ಕರ್, ರೆಡ್ಕ್ರಾಸ್ ಸಂಚಾಲಕ ಡಾ. ಉದಯ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಸುಷ್ಮಾ ಟಿ ಉಪಸ್ಥಿತರಿದ್ದರು.