ಗಂಗೊಳ್ಳಿ: ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿರುವಂಥವು. ಅವರ ಜೀವನವನ್ನು ಅಭ್ಯಸಿಸುವುದರ ಜೊತೆಗೆ ಅಂತಹ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಿದಾಗ ಜೀವನವು ಸಾರ್ಥಕವಾಗಲು ಸಾಧ್ಯ ಎಂದು ಜೆ.ಸಿ ರಾಷ್ಟ್ರೀಯ ತರಬೇತುದಾರರಾದ ಕೆ.ಕೆ ಶಿವರಾಮ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರ ಬದುಕು ಮತ್ತು ಸಾಧನೆಗಳ ಅಧ್ಯಯನ ಆತ್ಮವಿಶ್ವಾಸವನ್ನು ತುಂಬಿ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಎಲ್ಲರಿಗೂ ಪ್ರೇರೇಪಣೆ ನೀಡುತ್ತವೆ ಎಂದು ಅವರು ಹೇಳಿದರು. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲರಾದ ಕವಿತಾ ಎಮ್. ಸಿ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು.
ವಿದ್ಯಾರ್ಥಿಗಳಾದ ವೈಷ್ಣವಿ ಕೋಟೆಗಾರ್, ಶಶಾಂಕ್ ಶೆಣೈ ಮತ್ತು ಗಣೇಶ್ ಭಟ್ ವಿವೇಕಾನಂದರ ವಿಚಾರಧಾರೆಗಳ ಕುರಿತು ಮಾತನಾಡಿದರು.
ಉಪನ್ಯಾಸಕ ವೆಂಕಟೇಶಮೂರ್ತಿ ಎನ್ ಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಧನ್ಯ ಜಿ ಪ್ರಾರ್ಥಿಸಿದರು. ಆಂಗ್ಲಭಾಷಾ ಉಪನ್ಯಾಸಕ ಥಾಮಸ್ ಪಿ.ಎ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್. ಕೆ ವಂದಿಸಿದರು.
ವಿದ್ಯಾರ್ಥಿ ವಿನಯಚಂದ್ರ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಸುಜಯೀದ್ರ ಹಂದೆ, ರಾಘವೇಂದ್ರ ಭಟ್, ನರೇಂದ್ರ ಎಸ್ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.